ರಾಜ್ಯ ರಾಜಕಾರಣದಲ್ಲಿ ದಿಢೀರನೆ ಉಲ್ಭಣಗೊಂಡ ಬಿಕ್ಕಟ್ಟಿನ ಹಿಂದೆ ಸಂಸದ ಅನಂತ್ ಕುಮಾರ್ ಅವರ ಕೈವಾಡ ಇರುವ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಸುದ್ದಿ ಹರಿದಾಡುವ ಮೂಲಕ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಿಎಂ ಆಪ್ತ ಕಾರ್ಯದರ್ಶಿಯಾಗಿರುವ ಬಳಿಗಾರ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಗಣಿಧಣಿಗಳು ಈಗಾಗಲೇ ತಮ್ಮ ಬೆಂಬಲಕ್ಕಿರುವ ಆಪ್ತ ಶಾಸಕರೊಂದಿಗೆ ಹೈದರಾಬಾದ್, ಗೋವಾದ ರೆಸಾರ್ಟ್‌ಗಳಲ್ಲಿ ಠಿಕಾಣಿ ಹೂಡಿದ್ದಾರೆ. ಹೈಕಮಾಂಡ್ ನಡೆಸಿದ ಸಂಧಾನ ಮಾತುಕತೆಯೂ ಕೂಡ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಏತನ್ಮಧ್ಯೆ ಬಂಡಾಯಕ್ಕೆ ರೆಡ್ಡಿ ಸಹೋದರರೇ ಕಾರಣ ಎಂದು ನಂಬಲಾಗಿತ್ತಾದರೂ ಕೂಡ, ಇದೀಗ ಬಿಜೆಪಿಯೊಳಗೆ ಭುಗಿಲೆದ್ದಿರುವ ಅಸಮಾಧಾನದ ಸೂತ್ರಧಾರ ಅನಂತ್ ಕುಮಾರ್ ಎಂದು ಹೇಳಲಾಗುತ್ತಿದೆ ಎಂಬುದಾಗಿ ಟಿವಿ9 ವಿಶೇಷ ವರದಿ ತಿಳಿಸಿದೆ.
ಅನಂತ್ ಸೂತ್ರಧಾರ?: ರಾಜ್ಯರಾಜಕೀಯದಲ್ಲಿ ಬಂಡಾಯದ ರಣಕಹಳೆ ಊದಲು ಅಕ್ಟೋಬರ್ 24ರಿಂದಲೇ ಸಿದ್ದತೆ ನಡೆಸಲಾಗಿತ್ತು ಎಂದು ಮೂಲವೊಂದು ತಿಳಿಸಿದೆ. ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ರೆಡ್ಡಿ ಸಹೋದರರಿಗೆ ಸೇರಿದ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ 12-30ಕ್ಕೆ ಸಂಸದ ಅನಂತ್ ಕುಮಾರ್ ಅವರು ಗಣಿಧಣಿಗಳೊಂದಿಗೆ ರಹಸ್ಯ ಸಭೆ ನಡೆಸಿ ದೀರ್ಘ ಕಾಲಾವಧಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
NRB
ಅಕ್ಟೋಬರ್ 25ರಂದು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಖರ್ಚು-ವೆಚ್ಚ ಚಂದ್ರಶೇಖರದ್ದು) ಒಡೆತನದ ಜ್ಯುಪಿಟರ್ ಏರ್‌ವೇಸ್‌ನ ವಿಶೇಷ ವಿಮಾನದಲ್ಲಿ ಬೆಳಿಗ್ಗೆ 8.47ಕ್ಕೆ ಸಂಸದ ಅನಂತ್ ಕುಮಾರ್ ಹುಬ್ಬಳ್ಳಿಗೆ ಪ್ರಯಾಣ. ನಂತರ ಹುಬ್ಬಳ್ಳಿಯ ಇಂದಿರಾನಗರ ಕಾಲೋನಿಯಲ್ಲಿರುವ ತಮ್ಮ ಸಹೋದರ ನಂದಕುಮಾರ್ ಮನೆಯಲ್ಲಿ ನಡೆದ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತದನಂತರ ಸಂಸದ ಪ್ರಹ್ಲಾದ್ ಜೋಶಿ, ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಧ್ಯಾಹ್ನ 1.35ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್.
25ರಂದು ರಾತ್ರಿ 10-30ಕ್ಕೆ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಿಂದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ. 26ರಂದು ರೆಡ್ಡಿ ಸಹೋದರಿಂದ ಶಾಸಕರ ಜೊತೆ ಬಂಡಾಯದ ಮಾತುಕತೆಗೆ ಚಾಲನೆ. ಒಟ್ಟಾರೆ ಆಡಳಿತಾರೂಢ ಬಿಜೆಪಿಯಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಹಲವಾರು ಆಯಾಮಗಳು ದೊರೆಯುತ್ತಿದೆ. ಆದರೆ ಒಂದೆಡೆ ಮುಖ್ಯಮಂತ್ರಿಗಳು ಬಂಡಾಯ ಶಮನವಾಗುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ರೆಡ್ಡಿ ಸಹೋದರರು ಪಟ್ಟು ಸಡಿಲಿಸುತ್ತಿಲ್ಲ. ಶಾಸಕ ರೇಣುಕಾಚಾರ್ಯ ಕೂಡ ಸಿಎಂ ವಿರುದ್ಧ ಬಹಿರಂಗವಾಗಿ ಗುಡುಗತೊಡಗುವ ಮೂಲಕ ಬಿಕ್ಕಟ್ಟು ಮತ್ತಷ್ಟು ಉಲ್ಭಣಗೊಳ್ಳುವಂತಾಗಿದೆ.