ರಾಜಕೀಯ ಜಟಾಪಟಿಯ ನಡುವೆ ಭಾನುವಾರ ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಮನೆಯಲ್ಲಿ ಭಯ,ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕಾರಣ, ಅವರ ನಿವಾಸದಲ್ಲಿ ಸುಮಾರು ಒಂದುವರೆ ಅಡಿ ಉದ್ದದ ನಾಗರ ಹಾವು ದಿಢೀರನ್ ಪ್ರತ್ಯಕ್ಷವಾಗಿದ್ದಕ್ಕೆ.
ಬಿಕ್ಕಟ್ಟಿನ ಹಿಂದೆ ರೆಡ್ಡಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಅವರ ನಿವಾಸದಲ್ಲಿ ಕಾಣಿಸಿಕೊಂಡ ನಾಗರ ಹಾವು ರಾಜಕೀಯ ವಲಯದಲ್ಲಿ ಸಖತ್ ಸುದ್ದಿ ಮಾಡಿರುವುದಲ್ಲದೆ, ಇದು ರೆಡ್ಡಿಗೆ ಶುಭ ಲಕ್ಷಣವಲ್ಲ ಅಂತ ಜ್ಯೋತಿಷಿಗಳು ಕೂಡ ಕವಡೆ ಉರುಳಿಸತೊಡಗಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ವಾಪಸ್ ಆದ ಮರುದಿನ ರೆಡ್ಡಿ ಮನೆಯಲ್ಲಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ನಾಗರಹಾವು ಕಾಣಿಸಿಕೊಂಡಿದೆ. ನಂತರ ಉರಗ ಪ್ರೇಮಿಯೊಬ್ಬರು ಬಂದು ನಾಗರಾಜನನ್ನು ಎತ್ತಿಕೊಂಡು ಹೋಗಿದ್ದರು.
ಒಟ್ಟಾರೆ ರಾಜಕೀಯದ ಭಿನ್ನಮತದ ನಡುವೆಯೇ ರೆಡ್ಡಿ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿರುವುದು ಕೂಡ ರಾಜಕೀಯ ಹಾಗೂ ಜ್ಯೋತಿಷಿಗಳ ವಲಯದಲ್ಲಿ ಮತ್ತೊಂದು ಲೆಕ್ಕಚಾರ ಶುರುವಾಗಿದೆ.