ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿ, ಸೂಪರ್ ಸಿಎಂ ಎಂದೇ ಬಿಂಬಿತವಾಗಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೊನೆಯ ಸ್ಥಾನದಲ್ಲಿ ಕುಳಿತಿಕೊಳ್ಳುವ ಮೂಲಕ ಗಮನಸೆಳೆದರು.
ಕಳೆದ ಒಂದೂವರೆ ತಿಂಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಸಚಿವ ಸ್ಥಾನಗಳಲ್ಲಿ ಹೊಸ ಮುಖಗಳ ಸೇರ್ಪಡೆ ಹಾಗೂ ಹಳಬರ ಪದತ್ಯಾಗದಿಂದಾಗಿ ಕಲಾಪದಲ್ಲಿ ಕುರ್ಚಿಯ ಬದಲಾವಣೆ ವಿಶೇಷವಾಗಿತ್ತು.
ಗಣಿ ರೆಡ್ಡಿಗಳು ಹಾಗೂ ಮುಖ್ಯಮಂತ್ರಿಗಳ ನಡುವಿನ ಭಿನ್ನಮತಕ್ಕೆ ತಲೆಬಾಗಿದ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ ಸಚಿವ ಸ್ಥಾನದಿಂದ ಹೊರ ಹೋಗಿದ್ದರು. ಆ ಸ್ಥಾನವನ್ನು ಭಿನ್ನಮತದ ನಾಯಕರಾಗಿ ಕಾಣಿಸಿಕೊಂಡಿದ್ದ ಮಾಜಿ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಸರ್ಕಾರದಲ್ಲಿ ಉಂಟಾಗಿದ್ದ ಭಿನ್ನಮತ ಶಮನಗೊಂಡಿತ್ತು.
ಹೀಗಾಗಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಯಾವಾಗಲೂ ಕಲಾಪದಲ್ಲಿ ಮುಂದಿನ ಆಸನವನ್ನು ಅಲಂಕರಿಸುತ್ತಿದ್ದವರು ಈ ಬಾರಿ ಅದನ್ನು ಬಿಟ್ಟುಕೊಟ್ಟು ಹಿಂದಿನ ಆಸನದಲ್ಲಿ ಕಾಣಿಸಿಕೊಂಡರು.