ಕನ್ನಡದ ಮಣ್ಣಿನ ಮಗ, ರೈತ ಪುತ್ರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆತ್ಮಚರಿತ್ರೆ ಬರೆಯುತ್ತಿರುವ ವಿಷಯ ಹೊಸದಲ್ಲ. ಅದರಲ್ಲಿ ಎಲ್ಲವನ್ನೂ ಬಿಚ್ಚಿಡುವುದಾಗಿ ಅವರು ಈಗಾಗಲೇ ಹಲವೆಡೆ ಹೇಳಿಕೊಂಡಿದ್ದಾರೆ. ಆದರೆ ಅವರಿಗೀಗ ದೊಡ್ಡ ಸಮಸ್ಯೆ ಎದುರಾಗಿದ್ದೇನೆಂದರೆ, 'ರಾಜಕೀಯದಲ್ಲಿ ಅತ್ಯಂತ ಹೆಚ್ಚು ಅವಹೇಳನಕ್ಕೆ ಗುರಿಯಾಗಿರುವ' ನನ್ನ ಪುಸ್ತಕದ ಪ್ರಕಟಣೆಗೆ ಯಾವುದೇ ಪ್ರಕಾಶಕರು ಸಿಕ್ಕಿಲ್ಲವಂತೆ!
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಗೌಡರೇ ಈ ವಿಷಯ ಹೇಳಿಕೊಂಡಿದ್ದಾರೆ. ಆತ್ಮಚರಿತ್ರೆಯಲ್ಲಿ 52 ವರ್ಷಗಳ ಕಾಲದ ತನ್ನ ರಾಜಕೀಯ ಅನುಭವಗಳು ಇರಲಿವೆ ಎಂದಿರುವ ಅವರು, ಇದು ನಾಲ್ಕೈದು ಸಂಪುಟಗಳಲ್ಲಿ ಪ್ರಕಟಿಸಬೇಕಾಗಬಹುದು. ಅಷ್ಟು ಮಾಹಿತಿಗಳಿರುತ್ತವೆ. ಇದನ್ನು ಶಿಕ್ಷಣ ತಜ್ಞ, ಇತ್ತೀಚೆಗೆ ಚುನಾವಣೆಗೆ ನಿಂತು ಸೋಲು ಕಂಡಿದ್ದ ಪ್ರೊ.ರಾಧಾಕೃಷ್ಣ ಅವರು ಬರೆಯುತ್ತಿದ್ದಾರೆ ಎಂದರು.
ಹಾಸ್ಯಪೂರಿತ ಧ್ವನಿಯಲ್ಲೇ ಮಾತು ಮುಂದುವರಿಸಿದ ಅವರು, ರಾಜಕೀಯದಲ್ಲಿ ನನ್ನಷ್ಟು ಹೆಚ್ಚು ಅವಹೇಳನಕ್ಕೆ ಗುರಿಯಾಗಿರುವವರು ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂದಿರುವ ದೇವೇಗೌಡರು, ಈ ಸುದೀರ್ಘ ಆತ್ಮಚರಿತ್ರೆಯಲ್ಲಿ ನನ್ನ ಕುರಿತು ಮಾಡಿದ ಟೀಕೆಗಳಿಗೆಲ್ಲವಕ್ಕೂ ಉತ್ತರ ಇರುತ್ತದೆ ಎಂದಿದ್ದಾರೆ.