ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಕೇವಲ ಒಂದು ಗಂಟೆಯಷ್ಟು ಕಲಾಪ ನಡೆಸಿ, ಡಿ.21ರಿಂದ ಅಧಿವೇಶನ ನಡೆಸಲು ತೀರ್ಮಾನಿಸಿತ್ತು. ಒಟ್ಟಾರೆ ಕೇವಲ ಒಂದು ಗಂಟೆ ಅಧಿವೇಶನಕ್ಕೆ ವ್ಯಯವಾದ ಮೊತ್ತ 42.23ಲಕ್ಷ!
ವಿಧಾನ ಪರಿಷತ್ ಚುನಾವಣೆ ಸಮೀಪಕ್ಕೆ ಬರುತ್ತಿರುವುದರಿಂದ ಸದನವನ್ನು ಮುಂದೂಡಲು ಆಡಳಿತ ಹಾಗೂ ಪ್ರತಿಪಕ್ಷಗಳು ಮುಂಚಿತವಾಗಿಯೇ ನಿರ್ಧರಿಸಿದ್ದವು. ಆದರೂ ವಿಧಾನ ಮಂಡಲ ಅಧಿವೇಶನ ಕೈಗೊಂಡು ಕೇವಲ ಒಂದು ತಾಸು ಮಾತ್ರ ಕಲಾಪ ನಡೆಸಿ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳುವಂತಾಗಿದೆ.
ಈ ಕಲಾಪದಲ್ಲಿ ಕೈಗೊಂಡ ಪ್ರಮುಖ ಕಾರ್ಯವೆಂದರೆ ಅದು ಕೇವಲ ಸಂತಾಪ ಸೂಚನೆ ಮಾತ್ರ. ಆನಂತರ ಸದನವನ್ನು ಡಿಸೆಂಬರ್ 21ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.
ಅಧಿವೇಶನದ ಮುಂದೂಡಿಕೆಯಿಂದಾಗಿ ಶಾಸಕರ ಪ್ರಯಾಣ ಭತ್ಯೆಯಲ್ಲಿಯೂ ಕೂಡ ಸರ್ಕಾರದ ಬೊಕ್ಕಸದ ಮೇಲೆ ಹೊರೆ ಬೀಳುವಂತಾಗಿದೆ. ಒಂದು ದಿನದ ಅಧಿವೇಶನಕ್ಕಾಗಿ ಶಾಸಕರಿಗೆ 3ಸಾವಿರ ರೂಪಾಯಿ ಭತ್ಯೆ ದೊರೆಯುತ್ತದೆ.