ಉತ್ತರ ಕನ್ನಡ ಕುಮಟಾ ತಾಲೂಕಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಿಗೆ ಅಧ್ಯಕ್ಷತೆ ವಹಿಸಲು ನಿರಾಕರಿಸಿದ ಉಪವಿಭಾಗಾಧಿಕಾರಿ ಉದ್ಧಟತನದ ವರ್ತನೆ ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಮಂಗಳವಾರ ಧರಣಿ ನಡೆಸಿದ ಪ್ರಸಂಗ ನಡೆಯಿತು.
ಶೂನ್ಯ ವೇಳೆಯಲ್ಲಿ ಕುಮಟ ಶಾಸಕ ದಿನಕರ ಶೆಟ್ಟಿ ಅವರು ಉಪವಿಭಾಗಾಧಿಕಾರಿ ಗಂಗೂಬಾಯಿ ಮಾನ್ಕಲ್ ಅವರು ತಮಗೆ ಅವಮಾನ ಮಾಡಿ ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆಂದು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅವರ ಬೆಂಬಲಕ್ಕೆ ನಿಂತು ಎಲ್ಲಾ ಕಡೆ ಅಧಿಕಾರಿಗಳು ಹದ್ದುಮೀರಿ ವರ್ತಿಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸದನದ ಬಾವಿ ಮುಂದೆ ಧರಣಿ ನಡೆಸಿದರು.
ಈ ವಿಚಾರವನ್ನು ಹಕ್ಕುಭಾದ್ಯತ ಸಮಿತಿ ತನಿಖೆಗೆ ವಹಿಸುವುದಾಗಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ರೂಲಿಂಗ್ ನೀಡಿದರಾದರೂ, ಅದರಿಂದ ಸಮಾಧಾನಗೊಳ್ಳದ ಶಾಸಕರು ಧರಣಿಗೆ ಮುಂದಾದರು.
ಶಾಸಕರ ಬೆಂಬಲಕ್ಕೆ ನಿಂತು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರ ಹಕ್ಕಿನ ಪ್ರಶ್ನೆ ಇದಾಗಿದೆ. ಯಾವ ಪಕ್ಷದ ಶಾಸಕರಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತೆ ಇರಬೇಕು. ಈ ವಿಚಾರವನ್ನು ಹಕ್ಕು ಭಾದ್ಯತಾ ಸಮಿತಿಗೆ ಒಪ್ಪಿಸಬೇಕು ಹಾಗೂ ಉದ್ದಟತನ ತೋರಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.