ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2009( 11:48 IST )
ರೈತರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರಕಾರ ವಿಫಲವಾಗಿದ್ದು,ಪೊಲೀಸರಿಂದ ನಿರಂತರ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ರೈತರು, ಮಖ್ಯಮಂತ್ರಿಗಳು ಬೇಡಿಕೆಗಳನ್ನು ಈಡೇರಿಸುವುದಾಗಿ ಅಶ್ವಾಸನೆ ನೀಡಿದ ನಂತರ ಪಾದಾಯತ್ರೆಯನ್ನು ಬಿಡದಿಯಲ್ಲಿ ಮುಕ್ತಾಯಗೊಳಿಸಿದರು.
ಬಿಡದಿಗೆ ಆಗಮಿಸಿದ ರೈತರ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿ, ರೈತರ ಮೇಲೆ ದೌರ್ಜನ್ಯವೆಸಗಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಘೋಷಿಸಿ, ಇನ್ನಿತರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಡಿ.29 ರಂದು ಸಭೆ ಕರೆದಿರುವುದಾಗಿ ಹೇಳಿಕೆ ನೀಡಿದ ನಂತರ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಚಾಮರಾಜನಗರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವರ್ಗಾವಣೆಗೆ ನಮ್ಮ ಸಹಮತವಿಲ್ಲ. ಅವರನ್ನು ಅಮಾನತುಗೊಳಿಸಬೇಕು ಎಂದು ರೈತ ಸಂಘದ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.
ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿಪ್ರಹಾರ ನಡೆಸಿದಾಗ ಹಲವಾರು ರೈತರು ಗಾಯಗೊಂಡಿದ್ದರು.