ಒಬ್ಬೊಬ್ಬರೇ ಪ್ರಮಾಣವಚನ ಸ್ವೀಕರಿಸುವುದು ದುರಾದೃಷ್ಟಕರ ಸಂಗತಿ. ಇದು ರಾಜಕೀಯ ಅಧೋಗತಿಯಲ್ಲದೇ ಮತ್ತೇನಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.
ಒಬ್ಬೊಬ್ಬರೇ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದು ಈ ರಾಜ್ಯದ ದುರಂತ. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದ ರಾಜಕೀಯವನ್ನು ಸೂಕ್ಷ್ಮವಾಗಿ ಬಲ್ಲೆ. ಆದರೆ ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ಕಂಡಿರಲಿಲ್ಲ ಎಂದರು. ಅವರು ಹಿರಿಯ ರಾಜಕಾರಣಿ, ಮಾಜಿ ಸಚಿವ ಎಂ.ಚಂದ್ರಶೇಖರ್ ಅವರ 80ನೇ ವರ್ಷಾಬ್ಧಿ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ರೈತರ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ವರ್ತನೆ ಹೇಯ ಕೃತ್ಯ. ಸರ್ಕಾರ ರೈತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಸದನಗಳಲ್ಲಿ ರೈತರ ಪರವಾಗಿ ಸಿದ್ದರಾಮಯ್ಯ, ರೇವಣ್ಣ, ದತ್ತ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕೊಡದೆ ನುಣುಚಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗೆ ಗೌರವ ತರುವಂತಹದ್ದಲ್ಲ ಎಂದು ಆಪಾದಿಸಿದರು.