ಒತ್ತಡದ ತಂತ್ರ ಹೇರುವ ಮೂಲಕ ಕೊನೆಗೂ ಮಂತ್ರಿಗಿರಿ ಪಡೆದಿರುವ ಎಂ.ಪಿ.ರೇಣುಕಾಚಾರ್ಯಗೆ ಅಬಕಾರಿ ಖಾತೆ ಜವಾಬ್ದಾರಿ ವಹಿಸಲಾಗಿದೆ. ಆದರೆ ತನಗೆ ವಸತಿ ಖಾತೆ ಬೇಕೆನ್ನುವುದು ರೇಣುಕಾ ಅವರು ಮತ್ತೊಂದು ರಾಗ ಎಳೆಯುವ ಮೂಲಕ ತಮ್ಮ ಅತೃಪ್ತಿಯನ್ನು ಮುಂದುವರಿಸಿದ್ದಾರೆ.
ಪ್ರತಿಯೊಂದಕ್ಕೂ ಖ್ಯಾತೆ ತೆಗೆಯುತ್ತಿರುವ ರೇಣುಕಾಚಾರ್ಯ ಈ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ. ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ, ಅದನ್ನು ಬಿಟ್ಟು ಮತ್ತೆ ಭಿನ್ನರಾಗ ಎಳೆದರೆ ಅದಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವ ಆರ್.ಅಶೋಕ್, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸೇರಿದಂತೆ ಬೆಂಗಳೂರಿನ ಹಲವು ಶಾಸಕರು ಈಗಾಗಲೇ ರೇಣುಕಾಚಾರ್ಯ ಅವರಿಗೆ ಮಂತ್ರಿಗಿರಿ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೇಣುಕಾಚಾರ್ಯಗೆ ಅಬಕಾರಿ ಖಾತೆ ನೀಡಿ, ಕಟ್ಟಾ ಸುಬ್ರಹ್ಮಣ್ಯ ಅವರಿಗೆ ಹೆಚ್ಚುವರಿಯಾಗಿ ವಸತಿ ಖಾತೆ ಜವಾಬ್ದಾರಿ ವಹಿಸಲಾಗಿದೆ.
ತನಗೆ ನೀಡಿರುವ ಖಾತೆ ಬಗ್ಗೆ ಅಸಮಧಾನ ಹೊಂದಿದ್ದರೂ ಕೂಡ ರೇಣುಕಾಚಾರ್ಯ ಅವರು ಮಾತ್ರ ತಾನು ಖಾತೆ ಬಗ್ಗೆ ಯಾವುದೇ ಅಪಸ್ವರ ಎತ್ತಿಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಮತವೂ ಇಲ್ಲ ಎಂಬುದಾಗಿ ಸಮಜಾಯಿಷಿ ನೀಡಿದ್ದಾರೆ.