'ಪಕ್ಷದೊಳಗಿನ ಇತ್ತೀಚೆಗಿನ ಬೆಳವಣಿಗೆಯಿಂದ ಶೇ.60ರಷ್ಟು ಹಾನಿಯಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿಯ ಬಾವುಟ ಹಿಡಿಯಲೂ ಕೂಡ ನಾಚಿಕೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ' ಎಂದು ಕೈಮಗ್ಗ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವಿದ್ಯಮಾನಗಳಿಂದಾಗಿ ಪಕ್ಷದ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಆಂತರಿಕ ಬಿಕ್ಕಟ್ಟಿನಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಂದಿದೆ. ಒಂದು ವರ್ಷದೊಳಗೆ ಆಡಳಿತಾರೂಢ ಬಿಜೆಪಿ ಸರ್ಕಾರ ಪತನ ಹೊಂದುವ ಸಾಧ್ಯತೆ ಇರುವುದಾಗಿಯೂ ಅವರು ಭವಿಷ್ಯ ನುಡಿದಿದ್ದಾರೆ.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಂತ್ರಿಯಾಗುವುದಕ್ಕೆ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದೇನೆ. ಇನ್ನು ಮುಂದೆಯೂ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ಈಗಲಾದ್ರೂ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡರು.