ರಾಜ್ಯ ರಾಜಕಾರಣದಲ್ಲಿ ಹಾವು-ಮುಂಗುಸಿಯಂತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರು ಭಾನುವಾರ ಒಂದೇ ವೇದಿಕೆಯಲ್ಲಿ ಜತೆಗೂಡಿ ಅಚ್ಚರಿ ಮೂಡಿಸಿದರು. ಆದರೆ ಇಬ್ಬರೂ ನಸುನಕ್ಕರೆ ವಿನಃ ಮೌನಕ್ಕೆ ಶರಣಾಗಿದ್ದರು.
ಮಾಜಿ ಸಚಿವ ಎಂ. ಚಂದ್ರಶೇಖರ್ ಅವರ 80ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಈ ಇಬ್ಬರು ಮುಖಂಡರು ಭಾಗವಹಿಸುವುದರ ಮೂಲಕ ಅಚ್ಚರಿ ಮೂಡಿಸಿದ್ದು, ಮುಂದಿನ ರಾಜಕೀಯ ಧ್ರುವೀಕರಣಕ್ಕೆ ಇದು ನಾಂದಿ ಎಂದೇ ಹೇಳಲಾಗುತ್ತಿದೆ.
ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಿದ ನಂತರ ಇಬ್ಬರು ಬದ್ಧ ವೈರಿಗಳಾಗಿದ್ದರು. ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಬದ್ಧ ರಾಜಕೀಯ ಶತ್ರುಗಳಾಗಿರುವುದು ಜಗಜ್ಜಾಹೀರಾದ ವಿಚಾರ. ಆದರೂ ಕಾರ್ಯಕ್ರಮದಲ್ಲಿ ಇಬ್ಬರೂ ಮಾತನಾಡಿರಲಿಲ್ಲ. ಸಭೆಯಲ್ಲಿ ಮಾತನಾಡಿದ ಗೌಡರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಬಹುಪರಾಕ್ ಹೇಳಿದರು!