ನಗರದ ಸೌಂದರ್ಯ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತಲ 1ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಬಾರದೆಂದು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರಿಗೆ ಪತ್ರ ಬರೆಯುವುದಾಗಿ ನಗರಾಭಿವೃದ್ಧಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ವಿಧಾನಸೌಧದ ಒಂದು ಕಿ.ಮೀ.ವ್ಯಾಪ್ತಿಯೊಳಗೆ ಬ್ಯಾನರ್, ಕಟೌಟ್ ಹಾಕದಂತೆ ನಿಷೇಧ ಹೇರಲಾಗಿದೆ. ರಾಮಮಂದಿರದ ಆಟದ ಮೈದಾನದಲ್ಲಿ ಬಿಬಿಎಂಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತ್ಯಾಜ್ಯ ಮುಕ್ತ ಪ್ರದೇಶದ ಅಭಿಯಾನ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಫ್ಲೆಕ್ಸ್, ಕಟೌಟ್‌ಗಳನ್ನು ಶೀಘ್ರವೇ ನಿಷೇಧಿಸಲಾಗುವುದು ಎಂದು ವಿಧಾನಮಂಡಲದ ಕಲಾಪದಲ್ಲಿ ಸಚಿವರು ಘೋಷಿಸಿದ್ದರು. ಆದರೆ ಇದೀಗ ಮೊದಲು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಿಸಿದ್ದು, ನಂತರ ನಗರದಾದ್ಯಂತ ಈ ನಿಷೇಧ ಜಾರಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಯಾನರ್, ಕಟೌಟ್‌ಗಳಿಂದಾಗಿ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ, ಅಲ್ಲದೇ, ವಿಧಾನಸೌಧ, ಹೈಕೋರ್ಟ್ ಮತ್ತು ಶಾಸಕರ ಭವನದ ಸುತ್ತಮುತ್ತ ಇದರ ಹಾವಳಿ ಹೆಚ್ಚಾಗಿರುವುದರಿಂದ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.