ಸಚಿವ ಸ್ಥಾನ ಅಲಂಕರಿಸಿರುವ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಮುಂದುವರಿದಿರುವ ನಡುವೆಯೇ ಹಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ ಸಚಿವ ಜನಾರ್ದನ ರೆಡ್ಡಿ ರೇಣುಕಾಚಾರ್ಯಗೆ ಸಾಥ್ ನೀಡಿದ್ದಾರೆ.
ಸಚಿವ ಸಂಪುಟದಲ್ಲಿ ಇರುವವರೆಲ್ಲಾ ವಿವೇಕಾನಂದರೇನಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ಜನಾರ್ದನ ರೆಡ್ಡಿ ಮತ್ತು ಉಮೇಶ್ ಕತ್ತಿ ರೇಣುಕಾಚಾರ್ಯ ಅವರ ಭಿನ್ನರಾಗಕ್ಕೆ ಬೆಂಬಲ ಸೂಚಿಸಿದ್ದಾರೆ.
ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡಿರುವ ಕುರಿತು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಲಿ. ವಿರೋಧದ ಹೇಳಿಕೆ ಆಯಾ ಸಚಿವ, ಶಾಸಕರ ವೈಯಕ್ತಿಕ ವಿಚಾರ. ಅವರು ವರ್ಣರಂಜಿತ, ಚರ್ಚಾಸ್ಪದ ವ್ಯಕ್ತಿಯಾಗಿರುವುದರಿಂದ ವಿವಾದ ಉಂಟಾಗಿದೆ ಎಂದು ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ರೇಣುಕಾಚಾರ್ಯಗೆ ಮಂತ್ರಿ ಸ್ಥಾನ ನೀಡುವ ಸಂದರ್ಭದಲ್ಲಿ ಪಕ್ಷದ ಹಿರಿಯ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು. ಶಾಸಕರ ಯೋಚನೆಗಳಿಗೆ ಬೆಲೆ ಕೊಟ್ಟು ಒಳ್ಳೆಯ ಯೋಚನೆ ಮಾಡಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.