ನೈಸ್ ಯೋಜನೆಯಲ್ಲಿ ಬರುವ ಭೂಮಿಯಲ್ಲಿ ತಮಗಾಗಲಿ ಅಥವಾ ತಮ್ಮ ಕುಟುಂಬಕ್ಕಾಗಲಿ ಸೇರಿದ ಒಂದು ಸೆಂಟ್ಸ್‌ನಷ್ಟು ಜಮೀನು ಇದೆ ಎಂದು ಸಾಬೀತಾದಲ್ಲಿ ದೇಶದ ಕ್ಷಮೆ ಕೋರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲೆಸೆದಿದ್ದಾರೆ.
ಸರ್ವೋಚ್ಚನ್ಯಾಯಾಲಯವನ್ನು ತಪ್ಪು ದಾರಿಗೆಳೆದು ಮೂಲ ಒಪ್ಪಂದ ಉಲ್ಲಂಘಿಸಿ ಸಾವಿರಾರು ಎಕರೆಗಳಷ್ಟು ಹೆಚ್ಚುವರಿ ಜಮೀನನ್ನು ಬೆಂಗಳೂರು ಸುತ್ತಮುತ್ತ ನೈಸ್ ಯೋಜನೆಗೆ ನೀಡಲಾಗುತ್ತಿದೆ ಎಂದು ಗೌಡರು ಕಿಡಿಕಾರಿದರು.
ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನೈಸ್ ಅರ್ಜಿಯ ವಿಚಾರಣೆಯ ಹಿನ್ನೆಲೆಯಲ್ಲಿ ನವದೆಹಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ದೇವೇಗೌಡ ಮತ್ತು ಅವರ ಒಡನಾಡಿಗಳು ನೈಸ್ ಯೋಜನೆಗೆ ಸಂಬಂಧಿಸಿದ ಜಮೀನಿನಲ್ಲಿ ನಾಲ್ಕು ಸಾವಿರ ಎಕರೆ ಭೂಮಿ ಹೊಂದಿದ್ದಾರೆ ಎಂದು ನೈಸ್ ವಕೀಲ ದುಷ್ಯಂತ ದವೆ ನ್ಯಾಯಾಲಯದ ಮುಂದೆ ವಾದ ಮಂಡಿಸುತ್ತಲೇ ಬಂದಿದ್ದಾರೆ. ಈ ಬಗ್ಗೆ ಗೌಡರು ಸವಾಲೆಸೆದಿದ್ದಾರೆ.