ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೌಡರ ಹೇಳಿಕೆಯನ್ನು ಸಮರ್ಥಿಸಿಕೊಂಡು,ತಮ್ಮ ಪಕ್ಷ ಕೂಡ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡುವ ಮೂಲಕ ಗೂಂಡಾ ಪ್ರವೃತ್ತಿ ತೋರಿರುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಬಳಸಿರುವ ಭಾಷೆಯನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ ಅವರ ನಿಲುವಿಗೆ ನಾಚಿಕೆಪಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿರುವುದು ದುರದೃಷ್ಟಕರ ಎಂದ ಈಶ್ವರಪ್ಪ, ಜೆಡಿಎಸ್ಗೆ ತಾಕತ್ತಿದ್ದರೆ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ನೀಡಿದ ಹೇಳಿಕೆಗೆ ಪಕ್ಷ ಹಾಗೂ ಗೌಡರು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೌಡರ ವಿರುದ್ಧ ಈ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ದುರುದ್ದೇಶದಿಂದ ಪ್ರತಿಭಟನೆಯನ್ನು ಮುಂದುವರಿಸಿದರೆ, ಜೆಡಿಎಸ್ ಕೂಡ ಕೈ ಕಟ್ಟಿ ಕೂರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಎಚ್ಚರಿಕೆ ನೀಡಿದ್ದರು.