ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿನ್ನೆಲೆಯಲ್ಲಿ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದರು.
ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಈ ಸೂಚನೆಯನ್ನು ಹೊರಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಾರಂಟ್ ಮೇಲೆ ಬಂಧಿಸಲಾಗಿರುವ ಅಪರಾಧಿಗಳನ್ನು ಫೆ.28ರವರೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಬಿದರಿ ವಿವರಿಸಿದರು.
ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿರುವ ಅಪರಾಧಿಗಳು ಕೂಡಲೇ ಶರಣಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.