ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿಲ್ಲ, ನಿಗದಿಯಂತೆ ಚುನಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎನ್ನುವ ವರದಿಗಳನ್ನು ನಿರಾಕರಿಸಿದ ಅವರು, ಅಂತಹ ಯಾವುದೇ ಪ್ರಯತ್ನಗಳಿಗೆ ನಮ್ಮ ಸರ್ಕಾರದ ಬೆಂಬಲ ಇಲ್ಲ ಎಂದರು.
ಬಿಬಿಎಂಪಿ ಚುನಾವಣೆಗೆ ಸರ್ಕಾರ ಎಲ್ಲ ಸಿದ್ದತೆಗಳನ್ನು ನಡೆಸಿದ್ದು, ನ್ಯಾಯಾಲಯದ ಸೂಚನೆಯಂತೆ ಚುನಾವಣೆಗಳು ನಡೆಯಲಿದೆ ಎಂದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಶೀಘ್ರ ಚುನಾವಣೆ ನಡೆದು ಅಲ್ಲಿ ಆದಷ್ಟು ಬೇಗ ಜನಪ್ರತಿನಿಧಿಗಳ ಆಡಳಿತ ಬರಬೇಕೆನ್ನುವುದು ನಮ್ಮ ಅಪೇಕ್ಷೆ ಎಂದು ಹೇಳಿದರು.