ನೈಸ್ ಸಂಸ್ಥೆಯ ಅಶೋಕ್ ಖೇಣಿ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂಗಿಂತ ತುಂಬಾ ಡೇಂಜರ್. ನಾಜೂಕಾಗಿಯೇ ರೈತರಿಗೆ ಟೋಪಿ ಹಾಕಿದ ಉಗ್ರ ಭೂಗಳ್ಳ ಖೇಣಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದವರ ರೀತಿಯಲ್ಲಿ ಟಿಪ್ ಟಾಪ್ ಆಗಿ ಬಂದ ಅಶೋಕ್ ಖೇಣಿಯನ್ನು ನೋಡಿ ರಾಜ್ಯದ ಜನರು ನಂಬಿ ಮೋಸ ಹೋದರು ಎಂದು ತಿರುಗೇಟು ನೀಡಿದ್ದಾರೆ.
ಅವರು ಮಂಗಳವಾರ ಬಿಡದಿ ಸಮೀಪದ ಬನ್ನಿಕುಪ್ಪೆ ಗ್ರಾಮದಲ್ಲಿ ನೈಸ್ ಕಂಪನಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ, ಈ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ ನೈಸ್ ವಿರುದ್ಧ ತನ್ನ ಹೋರಾಟ ಮುಂದುವರಿಯಲಿದೆ ಎಂದು ಶಪಥ ಮಾಡಿದರು.
ಅಲ್ಲದೆ, ನನ್ನ ರಾಜಕೀಯ ಜೀವನದುದ್ದಕ್ಕೂ ವೈಕುಂಠ ಸಮಾರಾಧನೆ, ಚಪ್ಪಲಿ ಹಾರ, ಪ್ರತಿಕೃತಿ ದಹನದಂತಹ ಹಲವು ಪ್ರತಿಭಟನೆಗಳನ್ನು ಸಾಕಷ್ಟು ನೋಡಿದ್ದೇನೆ ಎಂದು ಹೇಳಿದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆರು ವಾರಗಳ ಗಡುವು ನೀಡಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ನಂತರ ರೈತರಿಗೆ ಸಲ್ಲಬೇಕಾದ ನ್ಯಾಯಯುತ ಭೂಮಿ ಹಾಗೂ ಅದಕ್ಕೆ ತಕ್ಕ ಬೆಲೆ ಸಲ್ಲಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.