ನೆರೆ ಹಾವಳಿಯಿಂದ ಜನರು ಸಂಕಷ್ಟದಲ್ಲಿದ್ದು, ಬೆಳೆ ಹಾಗೂ ಜಮೀನು ಕಳೆದುಕೊಂಡು ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ಕೇರಳಕ್ಕೆ ತೆರಳಿ ಮಸಾಜ್ ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರವಾಹ, ಬೆಳೆಹಾನಿ, ಹವಾಮಾನ ವೈಪರೀತ್ಯದಿಂದ ರಾಜ್ಯದ ಜನತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿಗಳು ಮೂರು ದಿನ ವಿಶ್ರಾಂತಿ ಪಡೆಯಲು ಕೇರಳಕ್ಕೆ ಹೋಗಿದ್ದಾರೆ ಎಂದರು.
ಕೇರಳದ ಕುಮಾರಕಂನಲ್ಲಿ ರಾಜ್ಯದ ಸಮಸ್ಯೆ ಮರೆತು ಮಸಾಜ್ ಮಾಡಿಕೊಂಡು ವಿಶ್ರಾಂತಿ ಪಡೆಯುತ್ತಿರಬೇಕೆಂದು ರೇವಣ್ಣ ವ್ಯಂಗ್ಯವಾಡಿದರು. ಅಲ್ಲದೆ, ನಾಳೆ ಸೂರ್ಯಗ್ರಹಣ ಇರುವುದರಿಂದ ಸರ್ಕಾರದ ಗ್ರಹಣ ಬಿಡಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗಿರಬೇಕೆಂದು ಟೀಕಿಸಿದರು.