ನೈಸ್ ಯೋಜನೆಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಗುಂಪಿನ ನಾಯಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಮೊದಲಿನಿಂದ ಇಲ್ಲಿವರೆಗಿನ ಎಲ್ಲಾ ನೈಸ್ ವಿಚಾರಗಳೂ ತನಿಖೆಯಾಗಲಿ, ನಿಜವಾಗಿಯೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಅಥವಾ ಕೇಂದ್ರ ಸರ್ಕಾರ ನೈಸ್ ವಿಚಾರವನ್ನು ಸಿಬಿಐಗೆ ಒಪ್ಪಿಸಬೇಕೆಂದ ರೇವಣ್ಣ, ಯೋಜನೆಗಳ ನೆಪದಲ್ಲಿ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಡಲು ಖೇಣಿಗೆ ನೀಡಲು ಮುಂದಾಗಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗೋಣಿಪುರದ ಬಳಿ 1700, ಬಿಡದಿ ಬಳಿ 1700 ಎಕರೆ ಸೇರಿದಂತೆ ರಾಮನಗರದ 220 ಕೆರೆಗಳ ಜಾಗವನ್ನು ಸಿ.ಎಂ ನೈಸ್ ಕಂಪನಿಗೆ ನೀಡಲು ಮುಂದಾಗಿದ್ದಾರೆ ಎಂದು ರೇವಣ್ಣ ಆರೋಪಿಸಿದರು.