ಜೆಡಿಎಸ್ ಮುಖಂಡರು ಕಾಡಿನಲ್ಲಿ ಇರಬೇಕಾದವರು, ಅವರಿಗೆ ನಾಡಿನ ಚಿಂತೆ ಯಾಕೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಕಟುವಾಗಿ ವ್ಯಂಗ್ಯವಾಡಿದ್ದಾರೆ.
ನಗರದ ನೂತನ ಮೇಲ್ಸೇತುವೆಯೊಂದನ್ನು ನಾಡಿಗೆ ಸಮರ್ಪಣೆ ಮಾಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಮುಖಂಡರ ಹೆಸರನ್ನು ಉಚ್ಚರಿಸಲಿಲ್ಲ. ವಿಶೇಷವಾಗಿ ಜೆಡಿಎಸ್ ಮುಖಂಡರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
'ನಾವು ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿದರೆ ನಿಮಗೇಕೆ ಚಿಂತೆ. ಸಮಸ್ಯೆ ಎದುರಾದರೆ ಬೆಂಗಳೂರಿನವರಿಗಾಗುತ್ತದೆ. ಹೊಳೆನರಸೀಪುರದವರಿಗೆ ತೊಂದರೆಯಾಗುತ್ತದೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
'ನೀವು ಬಳಸುತ್ತಿರುವ ಪದ ಮತ್ತು ನಿಮ್ಮ ವರ್ತನೆ ಗಮನಿಸಿದರೆ ನೀವು ಕಾಡಿನಲ್ಲಿರುವಂತೆ ಭಾಸವಾಗುತ್ತಿದೆ, ಕಾಡಿನಲ್ಲಿರುವ ನಿಮಗೆ ನಾಡಿನ ಚಿಂತೆ ಯಾಕೆ? ಎಂದು ಅಶೋಕ್ ಮಾತಿನ ಚಾವಟಿ ಬೀಸಿದರು.