ಅಕ್ರಮ-ಸಕ್ರಮ ಯೋಜನೆ ಜಾರಿಯಾಗದಿರಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪಿತೂರಿಯೇ ಕಾರಣ ಎಂಬ ಮುಖ್ಯಮಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸಿಎಂ ಇದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ-ಸಕ್ರಮ ಯೋಜನೆ ಕುರಿತಂತೆ ಮುಖ್ಯಮಂತ್ರಿಗಳು ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ರೆವಿನ್ಯೂ ಸ್ಥಳ ಮತ್ತು ಕಟ್ಟಡವನ್ನು ಸಕ್ರಮಗೊಳಿಸುವ ತರಾತುರಿಯ ಸುಗ್ರೀವಾಜ್ಞೆ ಪ್ರಸ್ತಾವನೆಗೆ ಸಹಿ ಹಾಕಲು ರಾಜ್ಯಪಾಲ ಭಾರದ್ವಾಜ್ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಮುಖಭಂಗ ಅನುಭವಿಸಿತ್ತು. ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸುವ ಧೋರಣೆ ಹಿಂದೆ ಕಾಂಗ್ರೆಸ್ ಪಿತೂರಿ ಅಡಗಿದೆ ಎಂದು ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದರು.
ಮುಖ್ಯಮಂತ್ರಿಗಳ ಹೇಳಿಕೆ ವಿರುದ್ಧ ಕಿಡಿಕಾರಿರುವ ದೇಶಪಾಂಡೆ, ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸಿರುವುದಕ್ಕೆ ಕಾರಣ ತಿಳಿದುಕೊಳ್ಳಬೇಕೆ ವಿನಃ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು. ಅಲ್ಲದೆ, ಅಕ್ರಮ-ಸಕ್ರಮ ಯೋಜನೆ ಜಾರಿಯಾಗುವುದು ಬಿಜೆಪಿಗೆ ಬೇಕಾಗಿಲ್ಲ. ವಿಧಾನ ಸಭೆಯ ಅಧಿವೇಶನದಲ್ಲೂ ಅಕ್ರಮ-ಸಕ್ರಮ ಯೋಜನೆಯನ್ನು ಮಂಡಿಸಿಲ್ಲ, ನಂತರ ಏಕಾಏಕಿ ಕ್ಯಾಬಿನೆಟ್‌ನಲ್ಲಿ ನಿರ್ಣಯ ಕೈಗೊಂಡು ಉದ್ದೇಶಪೂರ್ವಕವಾಗಿ ತಿರಸ್ಕೃತವಾಗಲಿ ಎಂಬ ನಿಟ್ಟಿನಲ್ಲಿಯೇ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.