ರಾಜ್ಯದಲ್ಲಿ ಮತಾಂತರಕ್ಕೆ ಮುಕ್ತ ಅವಕಾಶ ಇರಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಎಚ್.ಟಿ.ಸಾಂಗ್ಲಿಯಾನಾ ತಿಳಿಸಿದ್ದು, ಈ ಸಂಬಂಧ ತಾನು ಸಂಘ ಪರಿವಾರದೊಂದಿಗೆ ಮಾತುಕತೆ ನಡೆಸಲು ಸಿದ್ದ ಎಂಬುದಾಗಿಯೂ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಯ್ಕೆ ಅವರವರ ವೈಯಕ್ತಿಕ ನಿರ್ಧಾರವಾಗಿದೆ. ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದರು. ಕೋಮುದಳ್ಳುರಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮುಂದಿರುವುದು ದುರಂತ ಎಂದು ವಿಷಾದಿಸಿದರು.
ಮತಾಂತರಕ್ಕೆ ಅಡ್ಡಿಪಡಿಸುವುದು ತಪ್ಪು ಎಂದಿರುವ ಸಾಂಗ್ಲಿಯಾನಾ, ಕೋಮುದಳ್ಳುರಿಗೆ ಸಂಘ ಪರಿವಾರವೇ ಕಾರಣವಾಗಿದೆ. ಆ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಜೊತೆ ತಾನು ಮಾತುಕತೆಗೆ ಸಿದ್ದನಿರುವುದಾಗಿ ಹೇಳಿದರು. ಭಾರತ ಜಾತ್ಯತೀತ ದೇಶವಾಗಿದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಧರ್ಮದ ವಿಚಾರದಲ್ಲಿ ಹೊಡೆದಾಡುವುದು, ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೊದಲು ನಾವು ಭಾರತೀಯರು ಎಂಬುದನ್ನು ಮನಗಾಣಬೇಕು, ನಂತರ ಜಾತಿ ವಿಚಾರ. ಧರ್ಮದ ಆಯ್ಕೆ ವೈಯಕ್ತಿಕ ವಿಚಾರವಾಗಿದ್ದರಿಂದ ಅದರಲ್ಲಿ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಎಂದು ತಿಳಿಸಿದರು.