ಬಿಬಿಎಂಪಿ ಆಯುಕ್ತ ಭರತ್‌ಲಾಲ್ ಮೀನಾ ಅವರು ಲಂಚ ನೀಡಿ ಆ ಸ್ಥಾನಕ್ಕೆ ಬಂದಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಈ ಬಗ್ಗೆ ಖಂಡಿತವಾಗಿಯೂ ನಾನು ದೇವರ ಮುಂದೆ ಪ್ರಮಾಣ ಮಾಡಲು ಕೂಡಾ ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ.
ಕುಮಾರಸ್ವಾಮಿ ಹೇಳಿದ ದೇವಸ್ಥಾನಕ್ಕೆ ಹೋಗಿ ಪ್ರಮಾಣ ಮಾಡಲು ನಾನು ರೆಡಿ, ಯಾವ ದೇವಸ್ಥಾನ, ಎಲ್ಲಿ, ಯಾವಾಗ ಎಂಬುದನ್ನು ಅವರೇ ನಿರ್ಧರಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗುವುದಾದರೆ, ದೇವಸ್ಥಾನಕ್ಕೆ ಹೋಗಿ ಪ್ರಮಾಣ ಮಾಡಲು ನನ್ನಿಂದ ಯಾವುದೇ ಹಿಂಜರಿಕೆ ಇಲ್ಲ ಎಂದು ಯಡಿಯೂರಪ್ಪ ಗುಡುಗಿದರು.
ಟೆಂಡರ್ ತಾತ್ಕಾಲಿಕ ಸ್ಥಗಿತ: ಇದೇ ಸಂದರ್ಭ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಟೆಂಡರ್ ಪ್ರಕ್ರಿಯೆಯನ್ನು ಈಗಿರುವ ಹಂತದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಹೊಸಕೋಟೆಯ ಏಕರಾಜಪುರ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚುನಾವಣೆ ಮುಗಿದ ನಂತರ ಮತ್ತೆ ಈ ಪ್ರಕ್ರಿಯೆ ಆರಂಭವಾಗಲಿದೆ. ಪಾರದರ್ಶಕವಾಗಿಯೇ ಇದನ್ನು ನಡೆಸಲಾಗಿತ್ತು. ರಾತ್ರೋರಾತ್ರಿ ಕದ್ದುಮುಚ್ಚಿ ಟೆಂಡರ್‌ಗಳನ್ನು ಅಂತಿಮಗೊಳಿಸಿಲ್ಲ ಎಂದು ಸಮರ್ಥಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ 22 ಸಾವಿರ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ನೀಲನಕ್ಷೆಯನ್ನು ತಯಾರಿಸಿ ಅನುಮೋದನೆಗಾಗಿ ಬಹಳ ಹಿಂದೆಯೇ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ರೂ 3,248 ಕೋಟಿ ವೆಚ್ಚದಲ್ಲಿ ಏಳು ಕಡೆ ಸಿಗ್ನಲ್ ಮುಕ್ತ ಕಾರಿಡಾರ್‌ಗಳ ನಿರ್ಮಾಣ, ಅಂಡರ್‌ಪಾಸ್, ರಸ್ತೆಗಳ ವಿಸ್ತರಣೆ, ಮೇಲು ಸೇತುವೆ ನಿರ್ಮಾಣ ಇತ್ಯಾದಿ ಕಾಮಗಾರಿಗಳ ಇ-ಟೆಂಡರ್‌ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಅಕ್ಟೋಬರ್ 12ರಂದು ಉನ್ನತ ಮಟ್ಟದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದ ನಂತರವಷ್ಟೆ ಅದೇ ತಿಂಗಳ 21ರಂದು ಸರ್ಕಾರ ಅನುಮೋದನೆಯನ್ನು ನೀಡಿತ್ತು.
ಇಷ್ಟೇ ಅಲ್ಲ, ಡಿಸೆಂಬರ್ 7ರಂದು ಗುತ್ತಿಗೆದಾರರ ಪಟ್ಟಿಯನ್ನು ಪ್ರಕಟಿಸಿ, ಜಾಗತಿಕ ಮಟ್ಟದ ಟೆಂಡರ್ ಕರೆದು 29ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಗುತ್ತಿಗೆದಾರರ ಮನವಿ ಮೇರೆಗೆ ಕೊನೆಯ ದಿನಾಂಕವನ್ನು ಜನವರಿ 8ರವರೆಗೆ ವಿಸ್ತರಿಸಲಾಗಿತ್ತು. ಇವೆಲ್ಲ ನಡೆದ ನಂತರವಷ್ಟೆ, ತಾಂತ್ರಿಕವಾಗಿ, ಆರ್ಥಿಕವಾಗಿ ಅರ್ಹತೆ ಇರುವ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಲಾಗಿದೆ. ಎಲ್ಲರಿಗೂ ಇದರಲ್ಲಿ ಭಾಗವಹಿಸಲು ಅವಕಾಶ ನೀಡಿದ್ದೇವೆ. ಈ ಬಗ್ಗೆ ಒಂದೇ ಒಂದು ದೂರಾಗಲೀ, ಅಪಸ್ವರವಾಗಲೀ ಈವರೆಗೆ ಬಂದಿರಲಿಲ್ಲ ಎಂದು ಯಡಿಯೂರಪ್ಪ ವಿವರಿಸಿದರು.
ನಗರದ ಅಭಿವೃದ್ಧಿ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಬೇಕು ಎಂಬ ಕಾರಣಕ್ಕಾಗಿ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗಿದೆ ರಾತ್ರಿ ಅಂತಿಮಗೊಳಿಸಲಾಯಿತು. ರಾತ್ರೋರಾತ್ರಿ ಏನೋ ಆಗಿದೆ ಎಂದು ವಿನಾಕಾರಣ ಸುಮ್ಮಸುಮ್ಮನೆ ಗುಲ್ಲೆಬ್ಬಿಸಲಾಗುತ್ತಿದೆ. ಕಾನೂನಿನ ಚೌಕಟ್ಟನ್ನು ನಾವು ಎಲ್ಲೂ ಮೀರಿಲ್ಲ. ಅಭಿವೃದ್ಧಿಗೆ ಅಡ್ಡಗಾಲು ಹಾಕಲು ಪ್ರತಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಹಾಗಾದರೆ, ಅಧಿಕಾರಿಗಳು ರಾತ್ರಿ- ಹಗಲು ಕೆಲಸ ಮಾಡುವುದು ತಪ್ಪಾ ಎಂದು ಇದೇ ಸಂದರ್ಭ ಅವರು ಪ್ರಶ್ನಿಸಿದರು.