ಕುಡಿದ ಅಮಲಿನಲ್ಲಿ ಕರ್ತವ್ಯ ನಿರತ ಎಸ್‌ಐ ಕೆನ್ನೆಗೆ ಬಾರಿಸಿದ್ದ ಇರಾನ್ ಮೂಲದ ಯುವತಿಯರಿಬ್ಬರಿಗೆ ನಗರದ 11ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಷರತ್ತು ಬದ್ಧ ಜಾಮೀನು ನೀಡಿದೆ.
ಎಸ್‌ಐ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಯುವತಿಯರಿಬ್ಬರಿಗೆ 30ಸಾವಿರ ರೂಪಾಯಿಗಳ ಬಾಂಡ್ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ. ಅಲ್ಲದೇ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಸೂಚನೆ ನೀಡಿದೆ.
ಘಟನೆ ವಿವರ: ಕರ್ತವ್ಯ ನಿರತ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಗಣೇಶ್ ರಾವ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದ ಇರಾನ್ ಮೂಲದ ಯುವತಿಯರಿಗೆ ಜಾಮೀನು ನೀಡಲು 11ನೇ ಎಸಿಎಂಎಂ ನ್ಯಾಯಾಲಯ ನಿರಾಕರಿಸಿತ್ತು.
ಯುವತಿಯರ ಪರವಾಗಿ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ, ವಿಚಾರಣೆಯನ್ನು ಫೆಬ್ರುವರಿ 23ಕ್ಕೆ ಮುಂದೂಡಿತ್ತು.
ಫೆ.18ರ ರಾತ್ರಿ ಮದ್ಯಪಾನ ಮಾಡಿ ಕಾರಿನಲ್ಲಿ ಬರುತ್ತಿದ್ದ ಇರಾನ್ ಮೂಲದ ಅಜರ್ ಫಜ್ಲೆ(29) ಹಾಗೂ ಫಾರಿಂ(26) ಎಂಬಿಬ್ಬರನ್ನು ಎಸ್‌ಐ ಗಣೇಶ್ ರಾವ್ ಮತ್ತು ಸಿಬ್ಬಂದಿಗಳು ತಡೆದು ವಿಚಾರಣೆ ನಡೆಸಿ, ಪರವಾನಿಗೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಯುವತಿ ರಾವ್ ಅವರ ಕೆನ್ನೆಗೆ ಬಾರಿಸಿದ್ದಳು. ಅಲ್ಲದೇ ಕೈಗೆ ಪರಚಿ ಗಾಯಮಾಡಿದ್ದಳು. ನಂತರ ಅವರಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.