ನೈಸ್ ಯೋಜನೆ ವಿರೋಧಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರೈತರನ್ನು ಎತ್ತಿಕಟ್ಟುವ ಮೂಲಕ ಗೂಂಡಾಗಿರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.
ಅಲ್ಲದೇ ದೇವೇಗೌಡ ಮತ್ತು ಅವರ ಕುಟುಂಬ ಸದಸ್ಯರು ಅಧಿಕಾರದ ಗದ್ದುಗೆಯಲ್ಲಿದ್ದಾಗ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆಯೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ಯಾವುದನ್ನು ಸಿಬಿಐಗೆ ವಹಿಸಬೇಕು ಎಂಬುದನ್ನು ನಿರ್ಧಾರ ಮಾಡೋಣ ಎಂದು ಜೆಡಿಎಸ್‌ಗೆ ಬಹಿರಂಗ ಸವಾಲೊಡ್ಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡಲು ಹೋದ ಬಿಡಿಎ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವಂತೆ ಗೌಡರೇ ಸ್ಥಳೀಯರಿಗೆ ಸಲಹೆ ನೀಡಿದ್ದಾರೆಂದು ನೇರವಾಗಿ ಆರೋಪಿಸಿದರು.
ನೈಸ್ ವಿಚಾರ ಕುರಿತಂತೆ ದೇವೇಗೌಡರೊಂದಿಗೆ ಮಾತುಕತೆ ನಡೆಸಿ ಸಂದರ್ಭದಲ್ಲಿ, ಯಡಿಯೂರಪ್ಪನವರೇ ನಿಮ್ಮಿಂದ ಯಾವುದೇ ತಪ್ಪಾಗಿಲ್ಲ. ಆದರೆ ನಿಮ್ಮ ಅರಿವಿಗೆ ಬಾರದೇ ತಪ್ಪು ಮಾಡಬಹುದು ಎಂಬ ಆತಂಕ ತನಗೆ ಎಂದು ಹೇಳಿದ್ದರು. ಆದರೆ ಒಳಗೊಂದು ಹೊರಗೊಂದು ಎಂಬಂತೆ ನೈಸ್ ಯೋಜನೆ ಕುರಿತಂತೆ ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.