ಗೌಡರ ಹೋರಾಟ ಟೀಕಿಸುವ ಹಕ್ಕು ವಿಪಕ್ಷಗಳಿಲ್ಲ: ಕುಮಾರಸ್ವಾಮಿ
ರಾಮನಗರ, ಸೋಮವಾರ, 8 ಮಾರ್ಚ್ 2010( 12:31 IST )
ರೈತಪರ ಹೋರಾಟ ನಡೆಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೋರಾಟವನ್ನು ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಟೋಯೋಟ ಕಿರ್ಲೋಸ್ಕರ್ ಮೋಟಾರ್ ಕಂಪನಿ ಸಹಯೋಗದಲ್ಲಿ ಬಿಡದಿ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.
ನೈಸ್ ಯೋಜನೆಯ ಹೆಸರಲ್ಲಿ ಅಶೋಕ್ ಖೇಣಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಂಡು, ರೈತರನ್ನು ಬೀದಿಪಾಲು ಮಾಡಿ, ತಾವು ರಿಯಲ್ ಎಸ್ಟೇಟ್ ದಂಧೆ ನಡೆಸುವ ಹುನ್ನಾರದಲ್ಲಿದ್ದಾರೆ ಎಂದು ಆರೋಪಿಸಿದ ಅವರು, ಆ ನಿಟ್ಟಿನಲ್ಲಿ ರೈತರ ಅನ್ಯಾಯದ ವಿರುದ್ಧ ದೇವೇಗೌಡರು ಧ್ವನಿ ಎತ್ತಿದ್ದಾರೆ ಎಂದರು.
ಖೇಣಿ ಜೊತೆ ಕೈಜೋಡಿಸಿರುವ ನಾಯಕರು ಈಗ ರೈತರ ಬೆಂಬಲಕ್ಕೆ ನಿಂತಿರುವ ಗೌಡರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ವಿಪಕ್ಷಗಳು ಅನಾವಶ್ಯಕವಾಗಿ ಗೌಡರ ಹೋರಾಟವನ್ನು ಟೀಕಿಸುತ್ತಿವೆ. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟು ಗೌಡರು ರೈತಪರ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿರುವುದರಲ್ಲಿ ಹುರುಳಿಲ್ಲ ಎಂದರು.