ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಂಬಿಸಿ ಹೆತ್ತಬ್ಬೆಯನ್ನೇ ಮಗ, ಸೊಸೆ ಹಾಗೂ ಮೊಮ್ಮಗ ಒಟ್ಟಾಗಿ ಸೇರಿ ಚೀಲಕ್ಕೆ ಕಟ್ಟಿ ನಾಲೆಗೆ ಎಸೆದಿದ್ದು, ಅದೃಷ್ಟವಶಾತ್ 80ರ ಅಜ್ಜಿ ಪ್ರಾಣಾಪಾಯದಿಂದ ಪಾರಾದ ಘಟನೆ ಶ್ರೀರಂಗಪಟ್ಟಣದ ಬಳಿ ಸೋಮವಾರ ನಡೆದಿದೆ.
ತಾಯಿ ಲಕ್ಷ್ಮಮ್ಮ(80) ಅವರನ್ನು ಮಗ, ಸೊಸೆ ಹಾಗೂ ಮೊಮ್ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಕರೆದುಕೊಂಡು ಬಂದು ಆಕೆಯನ್ನು ಚೀಲದೊಳಕ್ಕೆ ಹಾಕಿ ವಿರಿಜಾ ನಾಲೆಗೆ ಎಸೆದು ಹೋಗಿದ್ದರು. ಆದರೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರಾದ ಮಹದೇವು ಎಂಬವರು ಕೂಡಲೇ ನಾಲೆಗೆ ಹಾಕಿದ್ದ ಚೀಲವನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್ ಲಕ್ಷ್ಮಮ್ಮ ಉಸಿರಾಡುತ್ತಿದ್ದು,ತಕ್ಷಣವೇ ಅವರನ್ನು ಶ್ರೀರಂಗ ಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದರು.
ಅಸ್ವಸ್ಥ ಲಕ್ಷ್ಮಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಲಕ್ಷ್ಮಮ್ಮ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರು. ತನ್ನ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸುತ್ತಾರೆಂದು ನಂಬಿ ಅವರೊಂದಿಗೆ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಗ ರಾಜು, ಸೊಸೆ ಪಾರ್ವತಿ ಹಾಗೂ ಮೊಮ್ಮಗನ ವಿರುದ್ಧ ಶ್ರೀರಂಗ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆಸ್ತಿಗಾಗಿಯೇ ಮಗ ಈ ಕೃತ್ಯ ಎಸಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.