ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಸಿಇಟಿ ಪರೀಕ್ಷೆ ಏಪ್ರಿಲ್ 28 ಮತ್ತು 29 ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಚಿವರು, ಸಿಇಟಿ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಮಾರ್ಚ್ 10ರ ನಂತರ ಅದಕ್ಕೆ ಬೇಕಾಗುವ ಅರ್ಜಿ ನಮೂನೆಗಳನ್ನು ಕಳುಹಿಸಲಾಗುವುದು ಹಾಗೆಯೇ, ಅಭ್ಯರ್ಥಿಗಳು ಮಾರ್ಚ್ 17ರ ಒಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್ ಸೀಟು ಪ್ರಕ್ರಿಯೆಯನ್ನು ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗಾ, ಶಿವಮೊಗ್ಗ ಹಾಗೂ ಮಂಗಳೂರುಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ ಎಂದರು.
ಅಲ್ಲದೆ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಾಜ್ಯದ ಆಯ್ದ 101 ಕೇಂದ್ರಗಳಲ್ಲಿ ಉಚಿತ ಸಿಇಟಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
25 ಸಾವಿರದವರೆಗೆ ಎಂಜಿನಿಯರಿಂಗ್ ರಾಂಕಿಂಗ್ ಪಡೆಯುವ ಮತ್ತು ವಾರ್ಷಿಕ ಆದಾಯ ಎರಡು ಲಕ್ಷ ರೂ.ಗಳಿಗೆ ಕಡಿಮೆ ಇರುವ ವಿದ್ಯಾರ್ಥಿಗಳು 15000ರೂ. ಮತ್ತಿತರ ಶುಲ್ಕವನ್ನು ಪಾವತಿಸಿ ಸೀಟು ಪಡೆಯುವ ಅವಕಾಶವನ್ನು ಈ ಬಾರಿ ಕಲ್ಪಿಸಲಾಗಿದೆ ಎಂದರು.