ದರೋಡೆ, ಕೊಲೆ, ಸುಲಿಗೆ, ಅತ್ಯಾಚಾರ, ಕೊಲೆಯತ್ನದಂತಹ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರಿಗೆ ಖಡಾಖಂಡಿತವಾಗಿ ಬಿಬಿಎಂಪಿ ಟಿಕೆಟ್ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಅಖಾಡ ಸಿದ್ದವಾಗಿದ್ದು, ಏತನ್ಮಧ್ಯೆ ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕೈಜೋಡಿಸುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ನಿಷ್ಠಾವಂತರು, ಪ್ರಾಮಾಣಿಕರು ಹಾಗೂ ಗೆಲ್ಲುವ ಕುದುರೆಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ. ಅಲ್ಲದೆ ನಾವು ಕೂಡ ಅವರಿಂದ ದೂರ ಬಂದಿದ್ದೇವೆ. ಹೀಗಾಗಿ ಮೈತ್ರಿಯ ವಿಷಯವನ್ನು ಚರ್ಚೆ ಮಾಡುವುದು ಅಪ್ರಸ್ತುತ ಎಂದರು.