ಬೇಸಿಗೆ ಮುಗಿಯುವವರೆಗೆ ವಿದ್ಯುತ್ ಸಮಸ್ಯೆ ಇಲ್ಲ: ಸುರೇಶ್ ಕುಮಾರ್
ಬೆಂಗಳೂರು, ಮಂಗಳವಾರ, 9 ಮಾರ್ಚ್ 2010( 18:37 IST )
ಈಗಾಗಲೇ ಮುಖ್ಯಮಂತ್ರಿಗಳು ಘೋಷಿಸಿರುವಂತೆ ರಾಜ್ಯದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ ಯಾವ ಸಮಯದಲ್ಲಿ ವಿದ್ಯುತ್ ಒದಗಿಸಲಾಗುವುದು ಎಂಬ ಪಟ್ಟಿಯನ್ನು ಪ್ರಕಟಿಸಿದ್ದು, ಬೇಸಿಗೆ ಮುಗಿಯುವವರೆಗೆ ವಿದ್ಯುತ್ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಎಲ್ಲಾ ಪ್ರದೇಶಗಳಿಗೂ ಯಾವ ಸಮಯದಲ್ಲಿ ವಿದ್ಯುತ್ ನೀಡಲಾಗುವುದು ಎಂಬುದನ್ನು ನಿಖರವಾಗಿ ತಿಳಿಸುವ ಉದ್ದೇಶದಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ವಿದ್ಯುತ್ ಸಮಸ್ಯೆ ಹೆಚ್ಚಾಗಬಾರದೆಂಬ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಅನ್ನು ಖರೀದಿಸಲಿದ್ದು, ಉಳಿದಂತೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ಅನುಕ್ರಮವಾಗಿ 750 ಮೆಗಾವ್ಯಾಟ್ ವಿದ್ಯುತ್ ಅನ್ನು ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಸರ್ಕಾರಗಳು ನಿರಂತರ ವಿದ್ಯುತ್ ಬಗ್ಗೆ ಕಾಳಜಿ ವಹಿಸಿದ್ದರೆ, ಇಂದು ಈ ಪರಿಸ್ಥಿತಿ ಬರುತ್ತಿಲ್ಲ ಎಂದು ಆರೋಪಿಸಿದ ಅವರು, ಹೀಗಿದ್ದರೂ ನಾವು ಅಧಿಕಾರಕ್ಕೆ ಬಂದ ಬಳಿಕ ಬಂಡವಾಳ ಹೂಡಿ ವಿದ್ಯುತ್ ಅನ್ನು ಉತ್ಪಾದಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದು ಸಮರ್ಥಿಸಿಕೊಂಡರು.