'ನಾನೇನು ಸನ್ಯಾಸಿಯಲ್ಲ, ನನಗೂ ಸಚಿವನಾಗಬೇಕೆಂಬ ಆಕಾಂಕ್ಷೆ ಇದೆ. ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ' ಹೀಗೆಂದವರು ಅತೃಪ್ತ ಶಾಸಕರಲ್ಲಿ ಪ್ರಮುಖರಾಗಿರುವ ಬೇಳೂರು ಗೋಪಾಲಕೃಷ್ಣ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ವೈಖರಿ ಬಗ್ಗೆ ಮತ್ತು ಸಚಿವ ಸಂಪುಟ ವಿಸ್ತರಿಸದಿರುವುದರಿಂದ ಅಸಮಾಧಾನಗೊಂಡಿರುವ ಕೆಲವು ಸಚಿವರು ಮತ್ತು ಶಾಸಕರು ನಗರದಲ್ಲಿ ಗುರುವಾರ ಬೆಳಿಗ್ಗೆ ಸಭೆ ಸೇರಿ ಸಮಾಲೋಚನೆ ನಡೆಸಿದರು.
ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೇಳೂರು ಪ್ರತಿಕ್ರಿಯಿಸಿದ ರೀತಿ ಇದಾಗಿತ್ತು. ಅಬಕಾರಿ ಸಚಿವ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅತಿಥಿಗೃಹವೊಂದರಲ್ಲಿ ನಡೆದ ಸಭೆಯಲ್ಲಿ ಸುಮಾರು 25ಮಂದಿ ಅತೃಪ್ತರು ಪಾಲ್ಗೊಂಡಿದ್ದರು.
ತಮಗೆ ನೀಡಿರುವ ಖಾತೆಗಳ ಬಗ್ಗೆ ತೃಪ್ತಿ ಕಾಣದ ಸಚಿವರು ಕೂಡಲೇ ತಮ್ಮ ಖಾತೆ ಬದಲಾಯಿಸಿ ಉತ್ತಮ ಖಾತೆ ಕೊಡಬೇಕು, ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು ಎಂಬುದು ಅತೃಪ್ತರ ಒತ್ತಾಯವಾಗಿದೆ.
ಅತೃಪ್ತರ ಬಳಿಗೆ ತೆರಳಿದ ಸಿಎಂ: ಸ್ಯಾಂಕಿ ರಸ್ತೆಯ ಅತಿಥಿ ಗೃಹದಲ್ಲಿ ಅತೃಪ್ತ ಶಾಸಕರು, ಸಚಿವರ ಸಭೆ ನಡೆಯುತ್ತಿದ್ದ ಮಾಹಿತಿ ತಿಳಿದ ಯಡಿಯೂರಪ್ಪ ಕೂಡಲೇ ಅಲ್ಲಿಗೆ ಭೇಟಿ ನೀಡಿ ಅತೃಪ್ತರ ಅಹವಾಲು ಆಲಿಸಿದರು.
ಅತೃಪ್ತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮುಖ್ಯಮಂತ್ರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಈ ಸಂದರ್ಭದಲ್ಲಿ ಹೇಳಿದರು.