ಬಳ್ಳಾರಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿ ರಾಜ್ಯದ ಗಡಿಯನ್ನು ನಾಶ ಮಾಡುತ್ತಿರುವ ರೆಡ್ಡಿ ಸಹೋದರರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದಿಂದ ಆಯ್ಕೆಯಾದ ನೂತನ ಕಾರ್ಪೋರೇಟರ್ಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ರೆಡ್ಡಿ ಸಹೋದರರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಬಿ. ಶ್ರೀರಾಮುಲು, ಈ ಮೂವರು ಕಳಂಕಿತ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಈ ಸಚಿವತ್ರಯರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯದಲ್ಲಿ ಹಲವು ಪ್ರತಿಭಟನೆಗಳು ನಡೆದರೂ ಅವರ ರಾಜೀನಾಮೆ ಪಡೆಯದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ನೈತಿಕ ಶಕ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಲು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಲೋಕಸಭಾ ಸ್ಪೀಕರ್ ಅವರಿಂದ ಅವಕಾಶ ಕೋರಿದ್ದಾರೆ. ಇದಕ್ಕೆ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷವೂ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.