ಕೇಂದ್ರದ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಶರದ್ ಪವಾರ್, ಕಾರಟ್ ನಿತೀಶ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರ ಫೋನ್ ಕದ್ದಾಲಿಸಿದೆ ಎಂಬ ಪತ್ರಿಕೆಯೊಂದರ ವರದಿ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರದ ಸಚಿವರು, ಶಾಸಕರ ಫೋನ್ ಕದ್ದಾಲಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಲವು ಪ್ರಮುಖರ ಫೋನ್ ಕದ್ದಾಲಿಕೆ ಮಾಡಿದೆ ಎಂದು ಬಿಜೆಪಿ ಮುಖಂಡರು ಬೊಬ್ಬೆಹೊಡೆಯುವ ಮೊದಲು ರಾಜ್ಯದಲ್ಲಿಯೂ ಕೆಲ ಸಚಿವರು, ಶಾಸಕರ ಪೋನ್ ಕದ್ದಾಲಿಸಲಾಗುತ್ತಿದೆಯಲ್ಲ ಆ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರವೇ ಕೆಲವು ಸಚಿವರು, ಶಾಸಕರ ಫೋನ್ ಕದ್ದಾಲಿಸುತ್ತಿದೆ ಎಂದು ದೂರಿದ ಅವರು, ಈ ಮಾತನ್ನು ನಾನು ಹೇಳುತ್ತಿಲ್ಲ, ಈಗಾಗಲೇ ಆ ಪಕ್ಷದ ಸಚಿವರು, ಶಾಸಕರೇ ಹಲವು ಬಾರಿ ಹೇಳಿದ್ದಾರೆಂಬುದಾಗಿಯೂ ಈ ಸಂದರ್ಭದಲ್ಲಿ ಸಮರ್ಥನೆಯನ್ನೂ ಕೂಡ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ತಮ್ಮದೇ ಪಕ್ಷದ ಸಚಿವರು, ಶಾಸಕರ ಮೇಲೆ ನಂಬಿಕೆಯಿಲ್ಲ, ಹಾಗಾಗಿ ಪಕ್ಷದ ಸಚಿವರು, ಶಾಸಕರು ಪ್ರತಿಪಕ್ಷಗಳ ಮುಖಂಡರ ಜೊತೆ ಏನು ಮಾತುಕತೆ ನಡೆಸುತ್ತಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅಂತೂ ಆಂಗ್ಲ ಮಾಧ್ಯಮವೊಂದು ಕೇಂದ್ರ ಸರ್ಕಾರದ ಫೋನ್ ಕದ್ದಾಲಿಕೆ ಪ್ರಕರಣವನ್ನು ಬಹಿರಂಗಪಡಿಸಿ ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಇತ್ತ ರಾಜ್ಯದಲ್ಲಿಯೂ ಕುಮಾರಸ್ವಾಮಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸುವ ಮೂಲಕ ಮತ್ತೊಂದು ವಿವಾದ ಹುಟ್ಟು ಹಾಕಿದಂತಾಗಿದೆ.
ಹೆಗಡೆ ಸರ್ಕಾರ ಕೂಡ ಪತನವಾಗಿತ್ತು!: ರಾಜ್ಯ ರಾಜಕಾರಣದಲ್ಲಿ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರು ಕೂಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಯಲಿಗೆ ಬಂದ ಬಾಟ್ಲಿಂಗ್, ಟೆಲಿಫೋನ್ ಕದ್ದಾಲಿಕೆ ಹಗರಣ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಇದರ ಪರಿಣಾಮ ಎಂಬಂತೆ ನ್ಯಾಯಾಲಯ ಮತ್ತು ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ರಾಮಕೃಷ್ಮ ಹೆಗಡೆ ತಲೆದಂಡವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.