ಬಿಬಿಎಂಪಿ ಚುನಾವಣೆಯ ಸಂದರ್ಭದಲ್ಲಿ ಜಾತಿ ರಾಜಕೀಯ ಮಾಡಿರುವುದಾಗಿ ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಧಿಕ್ಕಾರ ಕೂಗಿದ ಘಟನೆ ಶನಿವಾರ ನಡೆದಿದೆ.
ಕೆಪಿಸಿಸಿ ಕಚೇರಿ ಹೊರಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ, ಬಿಬಿಎಂಪಿ ಚುನಾವಣೆಯಲ್ಲಿ ಕೇವಲ ಕುರುಬ ಜನಾಂಗದವರಿಗೆ ಮಾತ್ರ ಟಿಕೆಟ್ ನೀಡಿ, ನಿಷ್ಠಾವಂತ ಕಾರ್ಯಕರ್ತರು ಹಾಗೂ ಇನ್ನಿತರ ಜಾತಿಯನ್ನು ಕಡೆಗಣಿಸಿರುವುದಾಗಿ ಆರೋಪಿಸಿದರು.
ಆದರೆ ಬಿಬಿಎಂಪಿಯಲ್ಲಿ ಸ್ವಜಾತಿಯವರಿಗೆ ಟಿಕೆಟ್ ನೀಡುವಲ್ಲಿ ತಾನು ಪಾತ್ರವಹಿಸಿಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರೆ, ಅದೇ ರೀತಿ ಶಾಸಕ ಕೃಷ್ಣಪ್ಪ ಕೂಡ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಟಿಕೆಟ್ ನೀಡಿದವರು ಯಾರು ಎಂದು ಪ್ರಶ್ನಿಸಿರುವ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಈ ನಾಯಕರೇ ಕಾರಣರಾಗಿದ್ದಾರೆ. ಆ ನಿಟ್ಟಿನಲ್ಲಿ ಅವರೆಲ್ಲ ರಾಜೀನಾಮೆ ನೀಡಬೇಕೆಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕೈವಾಡ ಇಲ್ಲ-ಸಿದ್ದರಾಮಯ್ಯ: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ತೋರಿಸಿ, ಧಿಕ್ಕಾರ ಕೂಗಿರುವ ಕುರಿತು ಸಿದ್ದರಾಮಯ್ಯನವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಟಿಕೆಟ್ ಹಂಚಿಕೆಯಲ್ಲಿ ನನ್ನ ಕೈವಾಡ ಇಲ್ಲ. ಅದು ಪಕ್ಷಕ್ಕೆ ಬಿಟ್ಟ ವಿಚಾರ. ಅಲ್ಲದೇ ಇದು ಪಕ್ಷದ ಆಂತರಿಕ ವಿಚಾರವಾದ್ದರಿಂದ ಹೊರಗೆ ಏನನ್ನೂ ಚರ್ಚಿಸಲ್ಲ. ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ನುಣುಚಿಕೊಂಡರು.