ಬಿಬಿಎಂಪಿ ಚೊಚ್ಚಲ ಸಭೆ: ಮೇಯರ್ ವಿರುದ್ಧ ವಾಗ್ದಾಳಿ, ಗದ್ದಲ
ಬೆಂಗಳೂರು, ಶುಕ್ರವಾರ, 30 ಏಪ್ರಿಲ್ 2010( 13:28 IST )
ಬಿಬಿಎಂಪಿಯ ಮೊದಲ ಸಾಮಾನ್ಯ ಸಭೆ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ, ಕೂಗಾಟದಿಂದ ನಡೆಯುವ ಮೂಲಕ ಸಾಕಷ್ಟು ಗದ್ದಲಕ್ಕೆ ಕಾರಣವಾಗಿ, ಮೇಯರ್ ಎಸ್.ಕೆ.ನಟರಾಜ್ ಸಭೆಯನ್ನು ಮುಂದೂಡಿದ ಘಟನೆ ಶುಕ್ರವಾರ ನಡೆಯಿತು.
ಸುಮಾರು ಮೂರು ವರ್ಷಗಳ ಬಳಿಕ ಚುನಾವಣೆ ನಡೆದು 198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಇಂದು ಮೊದಲ ಬಾರಿಗೆ ಮೇಯರ್ ಎಸ್.ಕೆ.ನಟರಾಜ್ ಅಧ್ಯಕ್ಷತೆಯಲ್ಲಿ ಚೊಚ್ಚಲ ಸಾಮಾನ್ಯ ಸಭೆ ಗದ್ದಲದಲ್ಲಿಯೇ ಆರಂಭಗೊಂಡು ಮುಂದೂಡಿಕೆಯಲ್ಲಿ ಸಮಾಪ್ತಿಗೊಂಡಿತ್ತು.
ಇಂದು ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಇಂಗ್ಲಿಷ್‌ನಲ್ಲಿ ಮುದ್ರಿಸಿದ ಕೈಪಿಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮೇಯರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಇಡೀ ಸಭೆ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು.
ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಮತ್ತು ಇಂಗ್ಲಿಷ್ ಕೈಪಿಡಿ ಕುರಿತಂತೆ ಮುಂದಿನ ಬಾರಿ ತಪ್ಪು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವುದಾಗಿಯೂ ಮೇಯರ್ ನಟರಾಜ್ ಆಶ್ವಾಸನೆ ನೀಡಿದರೂ ಕೂಡ ವಿರೋಧ ಪಕ್ಷಗಳ ಸದಸ್ಯರ ಗದ್ದಲ ಹೆಚ್ಚಾದಾಗ ಸಭೆಯನ್ನು ಮುಂದೂಡಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ನಟರಾಜ್, ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು 72ಗಂಟೆಯೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕ್ರಮ ಕೈಗೊಳ್ಳುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.