ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆದಿರುವ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಯಾಗಿದ್ದು, ಮೇ 6 ರಂದು ಎಸ್ಎಸ್ಎಲ್‌ಸಿ, ಮೇ 7ರಂದು ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಎಸ್ಎಸ್ಎಲ್‌ಸಿ ಫಲಿತಾಂಶ ಎಲ್ಲಾ ಶಾಲೆಗಳಲ್ಲಿ ಮೇ 6ರಂದು ಮಧ್ಯಾಹ್ನ 2 ಗಂಟೆಯೊಳಗೆ ಪ್ರಕಟಗೊಳ್ಳಲಿದ್ದು, ವೆಬ್‌ಸೈಟ್‌ನಲ್ಲಿ ಅಂದು ಬೆಳಿಗ್ಗೆಯೇ ಫಲಿತಾಂಶ ಲಭ್ಯವಾಗಲಿದೆ. ಅಲ್ಲದೇ ವೆಬ್ ದುನಿಯಾ ಕನ್ನಡದಲ್ಲಿಯೂ ಫಲಿತಾಂಶದ ಮಾಹಿತಿ ಪಡೆಯಬಹುದಾಗಿದೆ.
ಪಿಯುಸಿ ಫಲಿತಾಂಶ ಮೇ 6ರಂದು ಸಂಜೆ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದ್ದು, ಮೇ 7ರಂದು ಕಾಲೇಜುಗಳಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶವು ಈ ಬಾರಿ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಈ ಮೊದಲು ಮೇ 10ರಂದು ದ್ವಿತೀಯ ಪಿಯುಸಿ ಹಾಗೂ ಮೇ 20ರಂದು ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ ದಿಢೀರನೆ ಫಲಿತಾಂಶ ದಿನಾಂಕ ಬದಲಾವಣೆಯಾಗಿ, ಅವಧಿಗಿಂತ ಮೊದಲೇ ಫಲಿತಾಂಶ ಬಿಡುಗಡೆ ಮಾಡುತ್ತಿರುವುದಾಗಿ ಸ್ವತಃ ಶಿಕ್ಷಣ ಸಚಿವರೇ ಘೋಷಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.