ಬೆಂ ಗ್ರಾ. ದ್ವಿತೀಯ, ಮಂಡ್ಯ 3ನೇ ಸ್ಥಾನ 86 ಶಾಲೆಗಳಲ್ಲಿ ಶೂನ್ಯ ಫಲಿತಾಂಶ,
ಬೆಂಗಳೂರು, ಗುರುವಾರ, 6 ಮೇ 2010( 14:45 IST )
2010ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಚಿಕ್ಕೋಡಿ ಪ್ರಥಮ ಸ್ಥಾನ ಪಡೆದಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಹಾಗೂ ಬೀದರ್ ಜಿಲ್ಲೆ ಕೊನೆಯ ಸ್ಥಾನ ಪಡೆಯುವ ಮೂಲಕ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನದಿಂದ ವಂಚಿತವಾಗಿದೆ.
ಎಸ್ಎಸ್ಎಲ್ಸಿ ಫಲಿತಾಂಶ ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ, ಮಧ್ನಾಹ್ನ 2ಗಂಟೆಯೊಳಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವೆಬ್‌ದುನಿಯಾ ಅಂತರ್ಜಾಲ ಸುದ್ದಿ ತಾಣವೂ ಈ ಫಲಿತಾಂಶವನ್ನು ಪ್ರಕಟಿಸಿದೆ.
ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ವಿವರ ನೀಡಿದ ಅವರು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ.68.77ರಷ್ಟು ತೇರ್ಗಡೆ ಹೊಂದಿದ್ದು, ಕಳೆದ ವರ್ಷ ಈ ಪ್ರಮಾಣ ಶೇ. 75.11ರಷ್ಟಿತ್ತು. ಅಲ್ಲದೇ ಪ್ರತಿವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.
ಚಿಕ್ಕೋಡಿ ಪ್ರಥಮ ಸ್ಥಾನ ಶೇ.79.92, ಬೆಂಗಳೂರು ಗ್ರಾಮಾಂತರ 2ನೇ ಸ್ಥಾನ ಶೇ.79.21, ಮಂಡ್ಯ ಶೇ.79.12 ಫಲತಾಂಶ ಪಡೆದು ತೃತೀಯ ಸ್ಥಾನ ಗಳಿಸಿದೆ. ಅಲ್ಲದೇ ಈ ಬಾರಿಯೂ ಬೀದರ್ ಜಿಲ್ಲೆಗೆ ಕೊನೆಯ ಸ್ಥಾನ ಶೇ.32.27 ದಕ್ಕಿದೆ. ಪ್ರತಿವರ್ಷದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಅತ್ಯುತ್ತಮವಾಗಿರುವುದಾಗಿ ಹೇಳಿದ ಸಚಿವರು, ರಾಜ್ಯದ ಸುಮಾರು 86 ಶಾಲೆಗಳು ಫಲಿತಾಂಶ ಶೂನ್ಯ ಫಲಿತಾಂಶ ಪಡೆದಿರುವುದಾಗಿ ಹೇಳಿದರು. ಇದರಲ್ಲಿ ಎರಡು ಸರ್ಕಾರಿ ಶಾಲೆಗಳು, 84 ಖಾಸಗಿ ಶಾಲೆಗಳು ಎಂದು ವಿವರಿಸಿದರು,
ಕಳೆದ ವರ್ಷ ಉಡುಪಿ ಜಿಲ್ಲೆ ಶೇಕಡಾ 86.39 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರೆ, ಎರಡನೇ ಸ್ಥಾನ ಮಂಡ್ಯ ಜಿಲ್ಲೆ ಪಾಲಾಗಿತ್ತು. ಅದು ಶೇಕಡಾ 83.78 ಫಲಿತಾಂಶ ದಾಖಲಿಸಿತ್ತು. ಅಲ್ಲದೇ 82.23 ಶೇಕಡಾ ಫಲಿತಾಂಶ ಪಡೆದಿದ್ದ ಚಿಕ್ಕೋಡಿ ಮೂರನೇ ಸ್ಥಾನ ಪಡೆದಿತ್ತು. ದಕ್ಷಿಣ ಕನ್ನಡ ನಾಲ್ಕನೇ ಸ್ಥಾನಕ್ಕೆ (82.23%) ಕುಸಿದಿತ್ತು.