ಉದ್ಯಾನನಗರಿಯ ಹಲವೆಡೆ ಬೆಲೆಬಾಳುವ ನೂರಾರು ಎಕರೆ ಭೂಮಿ ಒತ್ತುವರಿ ಆಗಿದ್ದು, ಅದನ್ನು ತೆರವುಗೊಳಿಸಿ ಮತ್ತೆ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಠಿಣ ಕ್ರಮ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ನಗರದ ಸಮೀಪ 280ಎಕರೆ ಭೂಮಿ ಒತ್ತುವರಿ ಆಗಿದ್ದು ಗಮನಕ್ಕೆ ಬಂದ ತಕ್ಷಣ ತನಿಖೆಗೆ ಆದೇಶಿಸಿರುವುದಾಗಿಯೂ ಹೇಳಿದರು.
ನಗರದ ಹಲವೆಡೆ ಸರ್ಕಾರಿ ಜಮೀನುಗಳು ಪ್ರಭಾವಿಗಳ ಕೈವಶವಾಗಿದೆ. ಈ ಬಗ್ಗೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಡೆಯಾಜ್ಞೆಗಳೂ ಇವೆ. ಅವುಗಳ ಬಗ್ಗೆ ಕಾನೂನು ಸಮರ ಕೂಡ ಮುಂದುವರಿಸಲಾಗಿದೆ. ಅಲ್ಲದೇ ಭೂಮಿ ಒತ್ತುವರಿ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ಭೂಮಿ ಒತ್ತುವರಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ವಿವರಗಳನ್ನು ಪಡೆದುಕೊಳ್ಳುತ್ತೇನೆ. ಅಲ್ಲದೇ ಒತ್ತುವರಿ ತೆರವುಗೊಳಿಸಲು ಬೇಕಾದ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.