ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು ಅದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳು ಹಗರಣಗಳಲ್ಲಿ ತೊಡಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶನಿವಾರ ಆರೋಪಿಸಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನರು ವಿವಿಧ ಸಂಕಷ್ಟದಿಂದ ಬಳಲುತ್ತಿದ್ದಾರೆ. ಆದರೆ ಆಡಳಿತಾರೂಢ ಜನಪ್ರತಿನಿಧಿಗಳು ತಮ್ಮದೇ ಹಗರಣಗಳ ಸರಮಾಲೆಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.
ಪ್ರಕೃತಿ ವಿಕೋಪದಂತಹ ಸನ್ನಿವೇಶಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಂಥ ಮನೋಭಾವವನ್ನು ಎಲ್ಲಾ ಸೇವಾ ಸಂಸ್ಥೆಗಳು ಬೆಳೆಸಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು. ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸರ್ಕಾರಕ್ಕಿಂತ ಸಂಘ ಸಂಸ್ಥೆಗಳು ಹೆಚ್ಚು ನೆರವು ನೀಡಿದೆ ಎಂದರು.