ಸ್ನೇಹಿತನ ಪತ್ನಿಯನ್ನು ಅತ್ಯಾಚಾರಗೈದ ಆರೋಪ ಹೊತ್ತು ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಹರತಾಳ ಹಾಲಪ್ಪ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ. ಶಿವಮೊಗ್ಗದ ಎಸ್‌ಪಿ ಕಚೇರಿಗೆ ಆಗಮಿಸಿದ ಹಾಲಪ್ಪ ಪೊಲೀಸರಿಗೆ ಶರಣಾಗುವ ಮೂಲಕ ಇಷ್ಟು ದಿನಗಳ ಶೋಧಕ್ಕೆ, ರಾಜ್ಯದ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.
ಮಧ್ಯಾಹ್ನ ಸುಮಾರು 2.40ರ ವೇಳೆಗೆ ತಮ್ಮ ಸ್ಕೋಡಾ ಫೇಬಿಯಾ (ಕೆಎ 02 ಎಂಎಸ್ 2063) ಕಾರಿನಲ್ಲಿ ತಮ್ಮ ವಕೀಲರಾದ ಅಶೋಕ್ ಭಟ್ ಹಾಗೂ ರಮೇಶ್ ಚಂದ್ರ ಅವರ ಜೊತೆಗೆ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾದರು. ಮತದಾನಕ್ಕೂ ಗೈರುಹಾಜರಾಗಿ, ತಲೆಮರೆಸಿಕೊಂಡಿದ್ದ ಹಾಲಪ್ಪ ಅವರಿಗೆ ಸಿಐಡಿ ಪೊಲೀಸರು ಶರಣಾಗಲು ಸೋಮವಾರ (ಮೇ.10)ಕ್ಕೆ ಅಂತಿಮ ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಡುವು ಮುಗಿಯುವ ಮೊದಲೇ ಹಾಲಪ್ಪ ಭಾನುವಾರವೇ ಶರಣಾಗಿದ್ದಾರೆ.
ಹಾಲಪ್ಪ ಅವರು ಎಸ್‌ಪಿ ಕಚೇರಿಯಲ್ಲಿ ಶರಣಾದ್ದರಿಂದ, ಕೂಡಲೇ ಇವರನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಲಾಗುತ್ತದೆ. ತನಿಖಾಧಿಕಾರಿಗಳಿಗೆ ಸಾಕ್ಷ್ಯಾಧಾರಗಳು ಸರಿಯಾಗಿ ಕಂಡು ಬಂದಲ್ಲಿ ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಸಂಜೆಯೊಳಗೆ ಹಾಲಪ್ಪ ಅವರ ಬೆಂಬಲಿಗ ಗಿರೀಶ್ ಅವರೂ ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಶರಣಾಗತಿಯ ಸಂದರ್ಭ ಗಿರೀಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನೂ ನೀಡುವ ಸಂಭವವಿದೆ.
ಸೋಮವಾರ ಹಾಲಪ್ಪ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದು ಹೊಸದಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಲಿದ್ದಾರೆ. ಆರೋಪಗಳು ಗುರುತರವಾಗಿರುವುದರಿಂದ ಜಾಮೀನು ಸಿಗುವ ಸಾಧ್ಯತೆಗಳು ಕಡಿಮೆಯೇ ಎಂದು ಹೇಳಲಾಗುತ್ತಿದೆ. ಅತ್ಯಾಚಾರ ಪ್ರಕರಣವಾಗಿರುವುದರಿಂದ ಹಾಲಪ್ಪ ಅವರನ್ನು ಶೀಘ್ರವೇ ದೈಹಿಕ ಪರೀಕ್ಷೆಗೂ ಒಳಪಡಿಸಲಾಗುತ್ತದೆ. ಒಟ್ಟಾರೆ, ಇದೀಗ ಹಾಲಪ್ಪ ಪ್ರಕರಣ ಮುಂದೇನಾಗುತ್ತದೆ ಎಂಬುದೇ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.