ಹಿಂದೂ ಸಂಪ್ರದಾಯದ ಮೂಲ ತತ್ವಗಳನ್ನು ನಿರ್ಲಕ್ಷಿಸಿ, ಸೇವಾ ಮನೋಭಾವವನ್ನು ಮರೆತಿರುವ ಪರಿಣಾಮವೇ ಕಪಟ ಸನ್ಯಾಸಿಗಳು ಹೆಚ್ಚಾಗಲು ಕಾರಣ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಕೇವಲ ಬೋಧನೆಗೆ ಸೀಮಿತವಾಗುತ್ತಿರುವುದರಿಂದ ನಿತ್ಯಾನಂದನಂಥವರು ಜನರನ್ನು ಸುಲಭವಾಗಿ ಮೋಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಅಲ್ಲದೆ, ಪ್ರಕೃತಿ ವಿಕೋಪದಂತ ಸಂದರ್ಭದಲ್ಲಿ ನೆರವಾಗುವ ಮನೋಭಾವವನ್ನು ಎಲ್ಲಾ ಸಂಸ್ಥೆಗಳು, ಜನರು ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಿಗೆ ಸರ್ಕಾರಕ್ಕಿಂತ ಹೆಚ್ಚಾಗಿ ಸಾರ್ವಜನಿಕರೇ ನೆರವು ನೀಡಿದ್ದಾರೆ. ಆದರೆ ಇದರಲ್ಲಿ ಸರ್ಕಾರ ಜನರು ನೀಡಿದ್ದನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ ಮಂಪರು ಪರೀಕ್ಷೆ ಕುರಿತು ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ಅಪರಾಧಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದರಿಂದ ಅವರಿಗೆ ಕಿರಿಕಿರಿ ಉಂಟಾಗುತ್ತದೆ. ಇದರಿಂದ ಇಂಥ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.