ವಿವಾದಿತ ಪ್ರದೇಶ ಹೊರತುಪಡಿಸಿ ವಿವಾದ ರಹಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ಒಎಂಸಿ ಗಣಿ ಮಾಲೀಕ, ಸಚಿವ ಜನಾರ್ದನ ರೆಡ್ಡಿ, ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಸತ್ಯವೇ ನಮ್ಮ ತಾಯಿ, ತಂದೆ ಎಂದು ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಸೋಮವಾರ ನೀಡಿರುವ ಆದೇಶದಿಂದ ತಮಗೆ ಸಂತಸವಾಗಿದೆ ಎಂದರು. ಅಲ್ಲದೇ ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಆರೋಪ ಹೊರಿಸುತ್ತಿದ್ದ ರಾಜಕೀಯ ವಿರೋಧಿಗಳು ಕೂಡ ಸತ್ಯವನ್ನು ಅರಿಯಬೇಕಾಗಿದೆ ಎಂದು ಸಲಹೆ ನೀಡಿದರು.
ಒಎಂಸಿಯಿಂದ ಯಾವುದೇ ಭೂಮಿ ಒತ್ತುವರಿಯಾಗಿಲ್ಲ, ಆದರೆ ರಾಜಕೀಯ ವಿರೋಧಿಗಳು ನಮ್ಮನ್ನು ದೇಶದಲ್ಲಿಯೇ ಖಳನಾಯಕರಂತೆ ಬಿಂಬಿಸುವ ಯತ್ನ ಮಾಡಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶದಿಂದ ರಾಜಕೀಯ ವಿರೋಧಿಗಳಿಗೆ ಮುಖಭಂಗವಾಗಿದೆ ಎಂದು ವ್ಯಂಗ್ಯವಾಡಿದರು.
ನೆರೆಯ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸುಳ್ಳು ಹೇಳುವುದರಲ್ಲಿ ನಿಸ್ಸೀಮ, ಅದರಂತೆಯೇ ರಾಜ್ಯದ ಕೆಲವು ರಾಜಕಾರಣಿಗಳು ಕೂಡ ಸುಳ್ಳನ್ನೇ ಸತ್ಯ ಮಾಡಲು ಹೋರಾಡಿ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಾವಶ್ಯಕವಾಗಿ ಅಕ್ರಮ ಗಣಿಗಾರಿಕೆ ಆರೋಪ ಹೊರಿಸಿದ್ದಾರೆ ಎಂದು ಜನಾರ್ದನ ರೆಡ್ಡಿ, ಬಳ್ಳಾರಿಯ ಗಣಿ ಕುಳ ಬಲ್ಟೋಟಾ ರಾಜಕೀಯ ವ್ಯಕ್ತಿಗಳಿಗೆ ಹಣ ನೀಡಿ ನಮ್ಮ ತೇಜೋವಧೆಗೆ ಮುಂದಾಗಿರುವುದಾಗಿ ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದರು.
ತಮ್ಮ ವಿರುದ್ಧದ ಅಕ್ರಮ ಗಣಿಗಾರಿಕೆ ಆರೋಪ ಸತ್ಯಕ್ಕೆ ದೂರವಾದದ್ದು, ಆ ನಿಟ್ಟಿನಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿರುವುದಾಗಿ ಹೇಳಿದ ಅವರು, ಈ ಹೋರಾಟದಲ್ಲಿ ನಮಗೆ ಜಯ ದೊರೆಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.