ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾಮಿಸ್ವಾಮಿ ನಿತ್ಯಾನಂದ ಕೂಡ ಸಿಐಡಿ ಕಸ್ಟಡಿಯಲ್ಲಿದ್ದಾಗ ಎದೆನೋವಿನ ನಾಟಕವಾಡಿದಂತೆಯೇ, ಇದೀಗ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಕೂಡ ಜಾಮೀನು ದೊರೆಯುವವರೆಗೆ ಎದೆನೋವಿನ ನಾಟಕವಾಡಿ ಆಸ್ಪತ್ರೆಯಲ್ಲಿ ಠಿಕಾಣಿ ಹೂಡುವ ತಂತ್ರ ಅನುಸರಿಸಿದ್ದಾರೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸತೊಡಗಿವೆ.
ಹರತಾಳು ಹಾಲಪ್ಪ ಅವರ ಅನಾರೋಗ್ಯ ಮುಂದುವರಿದಿರುವುದಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಂದ್ರಪ್ಪ ತಿಳಿಸಿದ್ದು, ಅವರಿಗೆ ಪದೇ ಪದೇ ತಲೆಸುತ್ತು, ಎದೆನೋವು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಅತ್ಯಾಚಾರ ಆರೋಪ ಕುರಿತಂತೆ ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ್ದ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಮೇ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಏತನ್ಮಧ್ಯೆ ಹಾಲಪ್ಪ ಅವರು ಅನಾರೋಗ್ಯದ ನೆಪವೊಡ್ಡಿ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದು, ವಕೀಲರ ಮೂಲಕ ಕೋರ್ಟ್‌ಗೆ ವಿವರಣೆ ನೀಡಿದ್ದರು.
ಅಲ್ಲದೇ ತಮ್ಮ ಕಕ್ಷಿದಾರರ ವಿರುದ್ಧ ರಾಜಕೀಯ ವಿರೋಧಿಗಳು ಅನಾವಶ್ಯಕವಾಗಿ ಸುಳ್ಳು ದೂರನ್ನು ನೀಡಿದ್ದು, ಹಾಲಪ್ಪ ಅವರಿಗೆ ಕೂಡಲೇ ಜಾಮೀನು ನೀಡುವಂತೆ ಕೋರಿ ವಕೀಲ ರವಿ ನಾಯಕ್ ಅವರು ನಿನ್ನೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.
ಇದೊಂದು ನಾಟಕವೇ?: ನ್ಯಾಯಾಂಗ ಬಂಧನಕ್ಕೊಳಗಾಗಿರುವ ಹಾಲಪ್ಪ ಅವರು ಜಾಮೀನು ದೊರೆಯುವವರೆಗೆ ಎದೆನೋವಿನ ನಾಟಕ ಆಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ನಿಟ್ಟಿನಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಹಾಲಪ್ಪ ಅವರ ಅನಾರೋಗ್ಯದ ಕುರಿತು ಹೇಳಿಕೆ ನೀಡುತ್ತಿದ್ದಾರೆಂಬುದಾಗಿಯೂ ದೂರಿವೆ. ಈ ಹಿಂದೆ ಬಹುಕೋಟಿ ನಕಲಿ ಛಾಪಾ ಹಗರಣದಲ್ಲಿ ಸಿಕ್ಕಿ ಬಿದ್ದ ತೆಲಗಿಗೂ ಕೂಡ ಎದೆನೋವು ಇದೆ ಎಂದು ಸುಳ್ಳು ಸರ್ಟಿಪಿಕೆಟ್ ನೀಡಿದ್ದ ವೈದ್ಯಾಧಿಕಾರಿಗಳು ಜೈಲುಶಿಕ್ಷೆ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಕೆಲವೊಂದು ಸಂದರ್ಭದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರಚುವ ದೃಷ್ಟಿಯಿಂದಲೂ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಸಾಕಷ್ಟಿವೆ ಎಂಬುದು ಕಾನೂನು ತಜ್ಞರ ಅಭಿಮತ. ಹಾಗಾಗಿ ಹಾಲಪ್ಪ ಕೂಡ ಅದೇ ಹಾದಿಯನ್ನು ಹಿಡಿದಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ.