ಕೋಮು ಗಲಭೆ ನಡೆಸಲು ನಾನು ಯಾವುದೇ ಲಂಚ ಪಡೆದಿಲ್ಲ, ಇದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿ ಎಂದು ಖಾಸಗಿ ಚಾನೆಲ್‌ವೊಂದರ ರಸಹ್ಯ ಕಾರ್ಯಾಚರಣೆ ಕುರಿತು ಸ್ಪಷ್ಟನೆ ನೀಡಿರುವ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್, ಈ ಕಾರ್ಯಾಚರಣೆ ಹಿಂದೆ ಕಾಂಗ್ರೆಸ್ ಕೈವಾಡ ಇರುವುದಾಗಿ ಆರೋಪಿಸಿದ್ದಾರೆ.
ಹೆಡ್ ಲೈನ್ಸ್ ಟುಡೇ ಮತ್ತು ತೆಹಲ್ಕಾ ನಡೆಸಿರುವ ಜಂಟಿ ರಹಸ್ಯ ಕಾರ್ಯಾಚರಣೆಯಲ್ಲಿ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ಅವರು ಗಲಭೆ ನಡೆಸಲು 60ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಾರೆಂಬ ವೀಡಿಯೋ ತುಣುಕುಗಳ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಹುಬ್ಬಳ್ಳಿಯ ನಮ್ಮ ಕಚೇರಿಗೆ ಮಿತ್ರ ಪುಷ್ಪ ಶರ್ಮಾ ಎಂಬವರು ಬಂದು, ಲವ್ ಜಿಹಾದ್‌ಗೆ ಸಂಬಂಧಪಟ್ಟಂತೆ ಚಿತ್ರ ಪ್ರದರ್ಶನ ಏರ್ಪಡಿಸಲು ಯೋಜಿಸಿದ್ದು, ಇದಕ್ಕೆ ನಿಮ್ಮ ಸಹಕಾರ ಬೇಕು ಎಂದಿದ್ದರು. ಅದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವು. ಅಲ್ಲದೇ ಅವರು ಈ ಸಂದರ್ಭದಲ್ಲಿ ಸಂಸ್ಥೆಗೆ ಐದು ಸಾವಿರ ರೂಪಾಯಿಗಳ ದೇಣಿಗೆ ನೀಡಿದ್ದರು. ಅದಕ್ಕೆ ನಾನು ರಶೀದಿಯನ್ನೂ ಕೊಟ್ಟಿದ್ದೇನೆ. ಇದೀಗ ತಮ್ಮ ಪ್ರಚಾರದ ಭರಾಟೆಯನ್ನು ಹೆಚ್ಚಿಸಿಕೊಳ್ಳಲು, ನಾನು ಅರವತ್ತು ಲಕ್ಷ ರೂಪಾಯಿ ಸ್ವೀಕರಿಸಿದ್ದೇನೆ ಎಂದು ಗೂಬೆ ಕೂರಿಸಿ ಸುದ್ದಿ ಬಿತ್ತರಿಸುತ್ತಿರುವುದಾಗಿ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀರಾಮಸೇನೆ ಯಾವುದೇ ಲಂಚ ಸ್ವೀಕರಿಸುವ ಸಂಘಟನೆಯಲ್ಲ, ಲಂಚ ಸ್ವೀಕರಿಸಿ ಯಾವುದೇ ಗಲಭೆಯನ್ನು ನಡೆಸಿಲ್ಲ ಎಂದು ಹೇಳಿರುವ ಮುತಾಲಿಕ್, ಇದು ವ್ಯವಸ್ಥಿತ ಸಂಚು ಎಂದು ದೂರಿದ್ದಾರೆ.
ಮುತಾಲಿಕ್ ವಿರುದ್ಧ ಕ್ರಮ-ಸಿಎಂ: ಗಲಭೆ ಸೃಷ್ಟಿಸಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ವಿರುದ್ಧದ ಆರೋಪ ಸಾಬೀತಾದಲ್ಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾನೂನು ರೀತಿಯ ಕ್ರಮಕೈಗೊಳ್ಳಲು ಸರ್ಕಾರ ಯಾವುದೇ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೂ-ಸೇನೆಗೂ ಸಂಬಂಧವಿಲ್ಲ-ಆರ್ಎಸ್ಎಸ್: ಗಲಭೆ ಸೃಷ್ಟಿಸಲು ಮುತಾಲಿಕ್ ಲಂಚ ಸ್ವೀಕರಿಸಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಮಗೂ ಹಾಗೂ ಶ್ರೀರಾಮಸೇನೆಗೂ ಯಾವುದೇ ನಂಟಿಲ್ಲ. ಅಲ್ಲದೇ ಆರ್ಎಸ್ಎಸ್ ಹಿಂಸಾ ವಿರೋಧಿ ಸಂಘಟನೆಯಾಗಿದೆ ಎಂದು ಹೇಳಿದೆ.
ಚಾನೆಲ್-ಪತ್ರಿಕೆ ವಿರುದ್ಧ ಮೊಕದ್ದಮೆ-ಮುತಾಲಿಕ್: ಗಲಭೆ ನಡೆಸಲು ಲಂಚ ಸ್ವೀಕರಿಸಿದ್ದಾರೆಂಬ ವರದಿ ಪ್ರಕಟಿಸಿದ ಹೆಡ್‌ಲೈನ್ಸ್ ಟುಡೇ ಮತ್ತು ತೆಹಲ್ಕಾ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುತಾಲಿಕ್ ಗುಡುಗಿದ್ದಾರೆ. ಅಲ್ಲದೇ ಚಾನೆಲ್ ಕ್ಷಮೆಯಾಚಿಸಬೇಕೆಂದೂ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಒಂದು ವೇಳೆ ನಾನು ಲಂಚ ಪಡೆದಿದ್ದು ಸಾಬೀತಾದ್ರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ ಎಂದರು. ನಾನು ನಾಡು, ನುಡಿ ಭಾಷೆಗಾಗಿ ಹೋರಾಡುತ್ತಿದ್ದೇನೆ ವಿನಃ, ಲಂಚ ಸ್ವೀಕರಿಸುವಷ್ಟು ನೀಚ ನಾನಲ್ಲ ಎಂದು ತಿಳಿಸಿದ್ದಾರೆ.