ರಾಸಲೀಲೆ ಪ್ರಕರಣದಲ್ಲಿ ಪೊಲೀಸರ ಬಂಧನದಲ್ಲಿರುವ ನಿತ್ಯಾನಂದ ಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಿಐಡಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದೆ.
ನಟಿ ರಂಜಿತಾಳೊಂದಿಗಿನ ರಾಸಲೀಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ನಿತ್ಯಾನಂದನನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಜಾಮೀನು ಅರ್ಜಿ ಸಲ್ಲಿಸಿದ್ದು, ಮೇ 3ರಂದು ಅರ್ಜಿಯನ್ನು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು. ಆ ಕಾರಣದಿಂದಾಗಿ ನಿತ್ಯಾನಂದ ಸ್ವಾಮಿ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ.
ಏತನ್ಮಧ್ಯೆ ನಿತ್ಯಾನಂದ ಸ್ವಾಮಿ ಮುಖ್ಯಸ್ಥನಾಗಿದ್ದ ಟ್ರಸ್ಟ್‌ಗಳ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ನಾಲ್ಕು ಟ್ರಸ್ಟ್‌ಗಳವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಕೂಡ ಮೇ 18ರಂದು ನಡೆಯಲಿದೆ.
ತಮ್ಮ ಮೇಲಿರುವ ಆರೋಪಗಳ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾಗದಿದ್ದರೂ ವಿನಾ ಕಾರಣ ಪೊಲೀಸ್ ವಿಚಾರಣೆ ಹೆಸರಿನಲ್ಲಿ ನಿಯಮ ಬಾಹಿರವಾಗಿ ಜೈಲಿನಲ್ಲಿಡಲಾಗಿದೆ ಎಂದು ನಿತ್ಯಾನಂದ ಸ್ವಾಮಿ ತನ್ನ ಅರ್ಜಿಯಲ್ಲಿ ತಿಳಿಸಿದ್ದಾನೆ.