'ನಾನು ರಾಜಭವನದಲ್ಲಿ ಕುಳಿತು ಗಣಿ ವ್ಯವಹಾರ ಮಾಡುತ್ತಿಲ್ಲ, ರೆಡ್ಡಿ ಮಾತನಾಡುವಾಗ ಆಲೋಚಿಸಿ ಮಾತನಾಡಲಿ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರೊಬ್ಬರು ರೆಡ್ಡಿಯ ಸಚಿವ ಸ್ಥಾನ, ಶಾಸಕ ಸ್ಥಾನ ಅರ್ಹತೆ ಪ್ರಶ್ನಿಸಿ ದೂರು ಸಲ್ಲಿಸಿದ್ದರು. ಅದರ ಕುರಿತು ಸ್ಪಷ್ಟೀಕರಣ ಕೇಳಿದ್ದೆ ಅಷ್ಟೇ. ಆದರೆ ಅವರು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಸಂವಿಧಾನಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ರಾಜ್ಯಪಾಲ ಅಷ್ಟೇ ಅಲ್ಲ, ದೇಶದ ಹಿರಿಯ ವಕೀಲ ಕೂಡ ಹೌದು. ರಾಜ್ಯಪಾಲ ಮತ್ತು ವಕೀಲನಾಗಿ ಸ್ಪಷ್ಟೀಕರಣ ಕೇಳಿದ್ದು ಸರಿಯಾಗಿಯೇ ಇದೆ ಎಂದು ತಿರುಗೇಟು ನೀಡಿದ್ದಾರೆ.ನನ್ನ ಕಾರ್ಯವೈಖರಿ ಇಷ್ಟವಾಗಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ದೂರಿನ ಪ್ರತಿಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸುವೆ ಎಂದು ಖಾರವಾಗಿ ತಿಳಿಸಿದ್ದಾರೆ.
ಲಾಭದಾಯಕ ಹುದ್ದೆ ಹೊಂದಿದ್ದಾರೆ ಮತ್ತು ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಶಾಸಕರೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿವರಣೆ ಕೋರಿ ಷೋಕಾಸ್ ನೋಟಿಸ್ ನೀಡಿರುವುದು ತಪ್ಪು, ಇದು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ರಾಜ್ಯಪಾಲರ ವಿರುದ್ಧವೇ ಹರಿಹಾಯ್ದಿದ್ದರು.