ಗಲಭೆ ಸೃಷ್ಟಿಸಲು ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುವ ಇಲ್ಲವೇ ಶ್ರೀರಾಮಸೇನೆಯನ್ನು ನಿಷೇಧಿಸುವ ಪ್ರಶ್ನೆ ಸದ್ಯಕ್ಕೆ ಉದ್ಭವವಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಲ್ಲಿಗೆ ಆಗಮಿಸಿದ್ದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಶ್ರೀರಾಮಸೇನೆಯನ್ನು ಕೂಡಲೇ ನಿಷೇಧಿಸಿ, ಮುತಾಲಿಕ್ ಅವರನ್ನು ಬಂಧಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಹೆಡ್‌ಲೈನ್ಸ್ ಟುಡೇ ಮತ್ತು ತೆಹಲ್ಕಾ ಪತ್ರಿಕೆ ಜಂಟಿಯಾಗಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ, ಪ್ರಮೋದ್ ಮುತಾಲಿಕ್ ಅವರು ಗಲಭೆ ಸೃಷ್ಟಿಸಲು 60ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಾರೆಂಬ ಸ್ಫೋಟ ಅಂಶ ಬಹಿರಂಗವಾಗಿತ್ತು.
ಮುತಾಲಿಕ್ ಅವರ ಮುಖವಾಡ ಮಾಧ್ಯಮಗಳಲ್ಲಿ ಬಯಲಾಗುತ್ತಿದ್ದಂತೆಯೇ ಪ್ರತಿಪಕ್ಷಗಳು, ಶ್ರೀರಾಮಸೇನೆಯನ್ನು ನಿಷೇಧಿಸಿ, ಮುತಾಲಿಕ್ ಬಂಧನಕ್ಕೆ ತೀವ್ರ ಒತ್ತಡ ಹೇರುತ್ತಿವೆ. ಆದರೆ ಪ್ರಕರಣದಲ್ಲಿ ಮುತಾಲಿಕ್ ಅವರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಸರ್ಕಾರ ಯಾವುದೇ ಹಿಂದೇಟು ಹಾಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದರು.
ಅಲ್ಲದೇ ಹೆಡ್‌ಲೈನ್ಸ್ ಟುಡೇ ಮತ್ತು ತೆಹಲ್ಕಾ ನಡೆಸಿರುವ ರಸಹ್ಯ ಕಾರ್ಯಾಚರಣೆಯ ವೀಡಿಯೋವನ್ನು ತರಿಸಿಕೊಂಡು, ಅದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿ, ಅದರ ಸತ್ಯಾಸತ್ಯತೆ ಆಧಾರದ ಮೇಲೆ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದರು.