ನಗರದ ಲಾಲ್‌ಬಾಗ್ ಅನ್ನು ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದ್ದು, ಸಂಗೀತ ಕಾರಂಜಿ ಹಾಗೂ ರಾಕ್ ಗಾರ್ಡನ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕಾ ಮತ್ತು ಬಂಧಿಖಾನೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಲಾಲ್‌ಬಾಗ್‌ನಲ್ಲಿ ಸಿಂಗಾಪುರ ಮಾದರಿಯಲ್ಲಿ ವಿಶಿಷ್ಟವಾದ ಸಂಗೀತ ಕಾರಂಜಿಯನ್ನು 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದರು. ಅಲ್ಲದೇ ಲಾಲ್‌ಬಾಗ್‌ನಲ್ಲಿರುವ ಕಲ್ಲು ಬಂಡೆಯನ್ನು ಬಳಸಿಕೊಂಡು ಸುಂದರವಾದ ರಾಕ್ ಗಾರ್ಡನ್ ಅನ್ನು ನಿರ್ಮಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಈ ಯೋಜನೆಯನ್ನು ತೋಟಗಾರಿಕೆ ಇಲಾಖೆ, ಬಿಬಿಎಂಪಿ ಹಾಗೂ ಬಿಡಿಎಗಳು ಜಂಟಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು.