ರಾಜ್ಯದಲ್ಲಿ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿರುವುದು ಪ್ರಚಾರಕ್ಕಾಗಿ ಎಂದು ಟೀಕಿಸಿದವರಿಗೆ ಈಗ ಉತ್ತರ ದೊರೆತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕರ ಹಣದಿಂದ ಸಮಾವೇಶ ಮಾಡಿ ಜನರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಟೀಕಿಸುತ್ತಿದ್ದವರಿಗೆ ಸಮಾವೇಶ ನಡೆದ ಒಂದೇ ತಿಂಗಳಲ್ಲಿ ಯೋಜನೆ ಅನುಷ್ಠಾನದ ಮೂಲಕ ಉತ್ತರಿಸಲಾಗಿದೆ. ಮುಂದಾದರೂ ಅಪಸ್ವರ ಎತ್ತದೇ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಕೋರಿದರು.
ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ನೆಸ್ಲೆ ಇಂಡಿಯಾದಿಂದ 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಹಾರ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, ತಿಂಗಳಿಗೊಂದರಂತೆ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸರಕಾರ ಬದ್ಧ ಎಂದರು.
ಸಮಾವೇಶದ ಒಪ್ಪಂದ ಅನುಷ್ಠಾನಕ್ಕೆ ಉಪ ಸಮಿತಿ ರಚಿಸಿ ಅಧಿಕಾರ ನೀಡಲಾಗಿದೆ. ಭೂಮಿ ಕಳೆದುಕೊಂಡವರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಪರಿಹಾರದ ಜತೆಗೆ ಶೇ.5ರಷ್ಟು ಉದ್ಯೋಗ ನೀಡಲಾಗುವುದು. ಭೂಮಿ ನೀಡಿದ ರೈತರು ಮತ್ತೆ ಬೇರೆಡೆ ಕೃಷಿ ಭೂಮಿ ಖರೀದಿಸಿದರೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ ನೀಡಲು ಕಾನೂನಿಗೆ ತಿದ್ದುಪಡಿ ತರಲಾಗಿದೆ. ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದರೂ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸ್ವದೇಶಿ ಕಂಪನಿಗಳಿಗೆ ಬೆಂಗಳೂರು ಸುತ್ತಮುತ್ತಲಿಗೇ ಸಮಾವೇಶ ಸೀಮಿತವಾಗಿತ್ತು ಎನ್ನುವ ಟೀಕೆಗೆ ಆಧಾರವಿಲ್ಲ. 4 ಲಕ್ಷ ಕೋಟಿ ರೂ.ನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಕೇವಲ ಶೇ.6ರಷ್ಟು ಹೂಡಿಕೆಯಾಗಿದ್ದರೆ, ಉಳಿದದ್ದು ಇತರೆ ಜಿಲ್ಲೆಗಳಿಗೆ ಹಂಚಿಕೆಯಾಗಿದೆ. ಉತ್ತರ ಕರ್ನಾಟಕಕ್ಕೆ ಸಿಂಹಪಾಲು ಹೋಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.